ಶಾಸಕ ಅನಿಲ್ ಲಾಡ್‌ಗೆ ಚೀನಾ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದ ಹೈಕೋರ್ಟ್
ಬೇಲೇಕೇರಿ ಬಂದರಿನಿಂದ ಅದಿರು ಸಾಗಣೆ ಪ್ರಕರಣ
ಬೆಂಗಳೂರು, ಅ.25: ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಾಣೆ ಆರೋಪ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಶಾಸಕ ಅನಿಲ್ ಲಾಡ್‌ಗೆ ಚೀನಾ ಪ್ರವಾಸ ಕೈಗೊಳ್ಳಲು ಹೈಕೋರ್ಟ್ ಬುಧವಾರ ಷರತ್ತುಬದ್ಧ ಅನುಮತಿ ನೀಡಿದೆ.
ವ್ಯಾಪಾರ ಪ್ರವಾಸದ ಹಿನ್ನೆಲೆಯಲ್ಲಿ ಚೀನಾ ದೇಶಕ್ಕೆ ತೆರಳಬೇಕಿರುವ ಕಾರಣ, ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಜಾಮೀನು ನೀಡುವ ಸಂದರ್ಭದಲ್ಲಿ ದೇಶ ಬಿಟ್ಟು ತೆರಳದಂತೆ ವಿಧಿಸಲಾಗಿದ್ದ ಷರತ್ತು ಸಡಿಲಗೊಳಿಸುವಂತೆ ಕೋರಿ ಅನಿಲ್ ಲಾಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಅವರಿದ್ದ ಪೀಠ, ಅ.25ರಿಂದ ನ.4ರ ವರೆಗೆ ಚೀನಾ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿತು. ಇದೇ ವೇಳೆ ಪ್ರವಾಸದಿಂದ ಹಿಂದಿರುಗಿದ ನಂತರ ನ.7ರಂದು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ತಪ್ಪದೇ ಹಾಜರಾಗಬೇಕೆಂದು ಷರತ್ತು ವಿಧಿಸಿತು.
ಇದಕ್ಕೂ ಮುನ್ನ ವಾದ ಮಂಡಿಸಿದ ಅನಿಲ್ ಲಾಡ್ ಪರ ವಕೀಲ ಹಶ್ಮತ್ ಪಾಷಾ, ಅರ್ಜಿದಾರರು ಒಬ್ಬ ಉದ್ಯಮಿಯಾಗಿದ್ದು, ವ್ಯಾಪಾರದ ಸಂಬಂಧ ಚೀನಾಕ್ಕೆ ತೆರಳಬೇಕಿದೆ. ಅಕ್ರಮ ಅದಿರು ಸಾಗಾಣೆ ಪ್ರಕರಣದಲ್ಲಿ ಈ ಹಿಂದೆ ಜಾಮೀನು ನೀಡುವ ವೇಳೆ ದೇಶ ಬಿಟ್ಟು ತೆರಳದಂತೆ ಹೈಕೋರ್ಟ್ ಷರತ್ತು ವಿಧಿಸಿತ್ತು. ಅರ್ಜಿದಾರರು ಪ್ರಕರಣದ ತನಿಖೆಗೆ ಸಹಕರಿಸುತ್ತಿದ್ದು, ಈವರೆಗೆ ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಸಿಲ್ಲ. ಹೀಗಾಗಿ ಚೀನಾಕ್ಕೆ ತೆರಳಲು ಅನುಮತಿ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಈ ಮನವಿಯನ್ನು ಮಾನ್ಯ ಮಾಡಿದ ಹೈಕೋರ್ಟ್, ಅನಿಲ್ ಲಾಡ್ ಚೀನಾ ಪ್ರವಾಸಕ್ಕೆ ಷರತ್ತು ಬದ್ಧ ಅನುಮತಿ ನೀಡಿತು. ಶಾಸಕ ಅನಿಲ್‌ಲಾಡ್ ವಿರುದ್ಧ ಬೇಲೇಕೇರಿ ಬಂದರಿನ ಮೂಲಕ 13,342 ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ಸಾಗಣೆ ಮಾಡಿರುವ ಆರೋಪವಿದ್ದು, ಈ ಸಂಬಂಧ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.







