ಎರಡನೆ ಏಕದಿನ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್‌ಗಳ ಜಯ

ಪುಣೆ, ಅ.25: ನ್ಯೂಝಿಲೆಂಡ್ ವಿರುದ್ಧದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 231 ರನ್‌ಗಳ ಸವಾಲನ್ನು ಪಡೆದ ಭಾರತ ಶಿಖರ್ ಧವನ್ ಮತ್ತು ದಿನೇಶ್ ಕಾರ್ತಿಕ್ ಅವರ ಅರ್ಧಶತಕಗಳ ನೆರವಿನಲ್ಲಿ 46 ಓವರ್ ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 232 ರನ್ ಗಳಿಸಿ ಗೆಲುವು ದಾಖಲಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿ 1-1 ಗೆಲುವಿನೊಂದಿಗೆ ಸಮಬಲಗೊಂಡಿದೆ.
ದಿನೇಶ್ ಕಾರ್ತಿಕ್ ಔಟಾಗದೆ 64 ರನ್(92ಎ, 4ಬೌ), ಮಹೇಂದ್ರ ಸಿಂಗ್ ಧೋನಿ ಔಟಾಗದೆ 18 ರನ್, ಹಾರ್ದಿಕ್ ಪಾಂಡೆ 30 ರನ್ ಗಳಿಸಿದರು.
ಶಿಖರ್ ಧವನ್ ಜೊತೆ ಭಾರತದ ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮ(7) ಬೇಗನೆ ಪೆವಿಲಿಯನ್ ಸೇರಿದರು. ಟಿಮ್ ಸೌಥಿ ಎಸೆತದಲ್ಲಿ ಕಾಲಿನ್ ಮುನ್ರೊಗೆ ರೋಹಿತ್ ಶರ್ಮ ಕ್ಯಾಚ್ ನೀಡಿದರು. ಭಾರತ 22 ರನ್ ಗಳಿಸಿದ್ಧಾಗ ಮೊದಲ ವಿಕೆಟ್ ಪತನ ಗೊಂಡಿತು. ರೋಹಿತ್ ಶರ್ಮಗೆ ಎರಡಂಕೆಯ ಸ್ಕೋರ್ ದಾಖಲಿಸಲು ಸಾಧ್ಯವಾಗಲಿಲ್ಲ. ಬಳಿಕ ನಾಯಕ ವಿರಾಟ್ ಕೊಹ್ಲಿ ಮತ್ತು ಧವನ್ ಎರಡನೆ ವಿಕೆಟ್‌ಗೆ ಜೊತೆಯಾಟದಲ್ಲಿ 57 ರನ್ ಸೇರಿಸಿದರು. ಕೊಹ್ಲಿ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಇರುವ 29 ರನ್ ಸೇರಿಸಿದರು.
ಮೂರನೆ ವಿಕೆಟ್‌ಗೆ ಧವನ್ ಮತ್ತು ದಿನೇಶ್ ಕಾರ್ತಿಕ್ 66 ರನ್‌ಗಳ ಜೊತೆಯಾಟ ನೀಡಿದರು.ಶಿಖರ್ ಧವನ್ 68 ರನ್(84ಎ, 5ಬೌ,1ಸಿ) ಗಳಿಸಿದರು.
ನ್ಯೂಝಿಲೆಂಡ್ 230/9: ಟಾಸ್ ಜಯಿಸಿದ ನ್ಯೂಝಿಲೆಂಡ್ ತಂಡ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 230 ರನ್ ಗಳಿಸಿತ್ತು..







