ಜನರ ತೆರಿಗೆ ಹಣ ವ್ಯಯಿಸಲು ನಿರ್ಬಂಧ ಹೇರುವಂತಹ ಕಾನೂನು ಇದೆಯೇ: ವಕೀಲರನ್ನು ಪ್ರಶ್ನಿಸಿದ ಹೈಕೋರ್ಟ್
ವಿಧಾನಸೌಧ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ

ಬೆಂಗಳೂರು, ಅ.25: ವಿಧಾನಸೌಧ ವಜ್ರ ಮಹೋತ್ಸವ ಮಾದರಿ ಸರಕಾರಿ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಹಣ(ಜನರ ತೆರಿಗೆ) ವ್ಯಯಿಸಲು ನಿರ್ಬಂಧ ಹೇರುವಂತಹ ಕಾನೂನು ಇದೆಯೇ ಎಂದು ವಜ್ರ ಮಹೋತ್ಸವ ಆಚರಣೆಗೆ ತಡೆಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ವಕೀಲ ಎಸ್.ಎನ್.ಅರವಿಂದ ಅವರನ್ನು ಹೈಕೋರ್ಟ್ ಬುಧವಾರ ಪ್ರಶ್ನಿಸಿತು.
ಜನರ ತೆರಿಗೆ ಹಣವನ್ನು ಜನರ ಕಲ್ಯಾಣ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ವ್ಯಯಿಸಬೇಕು. ವಜ್ರ ಮಹೋತ್ಸವ ಆಚರಣೆಯು ಅನುತ್ಪಾದಕ ಕಾರ್ಯ. ಆದರೆ, ಸರಕಾರವು ವಜ್ರ ಮಹೋತ್ಸವಕ್ಕೆ 10 ಕೋಟಿ ರೂ. ವ್ಯಯಿಸುತ್ತಿರವುದು ನ್ಯಾಯಸಮ್ಮತವಲ್ಲ. ಹೀಗಾಗಿ, ಈ ಕಾರ್ಯಕ್ರಮ ನಡೆಸದಿರಲು ಸರಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರು ಮತ್ತು ಆಡಳಿತ ವಿಭಾಗದ ಕಾರ್ಯದರ್ಶಿಗೆ ನಿರ್ದೇಶಿಸುವಂತೆ ಅರವಿಂದ ಅರ್ಜಿಯಲ್ಲಿ ಕೋರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು, ಅವರಿಗೆ ಹೀಗೆ ಪ್ರಶ್ನಿಸಿದರು. ಆದರೆ, ನಾಯಪೀಠದ ಪ್ರಶ್ನೆಗೆ ತಕ್ಷಣವೇ ಸೂಕ್ತ ಉತ್ತರವನ್ನು ಅರವಿಂದ ನೀಡಲಿಲ್ಲ. ಆಗ ಪ್ರತಿಕ್ರಿಯಿಸಿದ ಪೀಠ, ಸರಕಾರಿ ಕಾರ್ಯಕ್ರಮಗಳಿಗೆ ಜನರ ತೆರಿಗೆ ಹಣ ವ್ಯಯಿಸುವುದನ್ನು ನಿರ್ಬಂಧಿಸುವ ಕಾನೂನು ಬಗ್ಗೆ ತಿಳಿಸಿದರೆ ವಜ್ರ ಮಹೋತ್ಸವ ಆಚರಣೆಯನ್ನು ಕೂಡಲೇ ತಡೆಹಿಡಿಯಲು ಆದೇಶಿಸಲಾಗುವುದು. ಇಲ್ಲವೇ ಅರ್ಜಿ ವಜಾಗೊಳಿಸಲಾಗುವುದು ಎಂದು ತಿಳಿಸಿತು.
ಗುರುವಾರ ಈ ಕುರಿತು ಮಾಹಿತಿ ನೀಡಲಾಗುವುದು ಎಂದು ಅರವಿಂದ ತಿಳಿಸಿದರು. ಅದಕ್ಕೆ ಸಮಯಾವಕಾಶ ನೀಡಿದ ಪೀಠ, ವಜ್ರಮಹೋತ್ಸವ ಇಂದು ನಡೆಯುತ್ತಿದೆಯಲ್ಲವೇ ಎಂದು ಮರು ಪ್ರಶ್ನೆ ಹಾಕಿತು. ನಂತರ ಕಾನೂನಿನ ಮಾಹಿತಿ ನೀಡಿ, ಅಗತ್ಯವಾದರೆ ಮುಂದೆ ಸರಕಾರಿ ಕಾರ್ಯಕ್ರಮಗಳ ಆಯೋಜನೆಗೆ ಜನರ ಹಣ ಖರ್ಚು ಮಾಡುವ ಕುರಿತು ಸೂಕ್ತ ನಿಯಮ ರೂಪಿಸಲು ಆದೇಶ ಹೊರಡಿಸಬಹುದು ಎಂದು ತಿಳಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.







