ಅಮೆರಿಕ: ಇನ್ನು ಎಚ್-1ಬಿ, ಎಲ್1 ವೀಸಾಗಳ ನವೀಕರಣ ತ್ರಾಸದಾಯಕ
ಅಮೆರಿಕದಲ್ಲಿ ಭಾರತೀಯ ಐಟಿ ಉದ್ಯೋಗಿಗಳಿಗೆ ಮತ್ತಷ್ಟು ಸಂಕಷ್ಟ

ವಾಶಿಂಗ್ಟನ್, ಅ. 25: ಎಚ್-1ಬಿ ಮತ್ತು ಎಲ್1 ಮುಂತಾದ ವಲಸಿಗೇತರ ವೀಸಾಗಳ ನವೀಕರಣವನ್ನು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಹೆಚ್ಚು ತ್ರಾಸದಾಯಕವಾಗಿಸಿದೆ. ವೀಸಾಗಳ ವಿಸ್ತರಣೆಯ ಸಂದರ್ಭದಲ್ಲೂ, ಪುರಾವೆಗಳನ್ನು ಸಲ್ಲಿಸುವ ಹೊಣೆ ಅರ್ಜಿದಾರನದ್ದಾಗಿದೆ ಎಂದು ಅದು ಹೇಳುತ್ತದೆ.
ಎಚ್-1ಬಿ ಮತ್ತು ಎಲ್1 ವೀಸಾಗಳನ್ನು ಭಾರತೀಯ ಮಾಹಿತಿ ತಂತ್ರಜ್ಞಾನ ಪರಿಣತರು ಹೆಚ್ಚಾಗಿ ಬಳಸುತ್ತಿದ್ದಾರೆ.
ತನ್ನ 13 ವರ್ಷಗಳಿಗಿಂತಲೂ ಹಳೆಯ ನೀತಿಗೆ ತಿದ್ದುಪಡಿಗಳನ್ನು ತಂದಿರುವ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್)ಯು, ಅರ್ಹತೆಯನ್ನು ಸಾಬೀತುಪಡಿಸಲು ಪುರಾವೆಗಳನ್ನು ಸಲ್ಲಿಸುವ ಹೊಣೆ ಯಾವತ್ತೂ ಅರ್ಜಿದಾರನದಾಗಿರುತ್ತದೆ ಎಂದಿದೆ.
2004 ಎಪ್ರಿಲ್ 23ರಂದು ಜಾರಿಗೆ ಬಂದಿರುವ ಹಿಂದಿನ ನೀತಿಯ ಪ್ರಕಾರ, ಅರ್ಹತೆಗೆ ಸಂಬಂಧಿಸಿ ಪುರಾವೆಗಳನ್ನು ಸಂಗ್ರಹಿಸುವ ಹೊಣೆಯು ಯುಎಸ್‌ಸಿಐಎಸ್‌ನದಾಗಿತ್ತು.
ವಲಸಿಗೇತರ ಸ್ಥಾನಮಾನದ ವಿಸ್ತರಣೆಯನ್ನು ಕೋರುವ ಸಂದರ್ಭದಲ್ಲಿಯೂ, ಅದಕ್ಕಾಗಿ ಪುರಾವೆಯನ್ನು ಸಲ್ಲಿಸುವ ಹೊಣೆಯು ಅರ್ಜಿದಾರನದಾಗಿರುತ್ತದೆ ಎಂದು ನೂತನ ನೀತಿಯು ಹೇಳುತ್ತದೆ. ಯುಎಸ್‌ಸಿಐಎಸ್ ತನ್ನ ನೂತನ ನೀತಿಯನ್ನು ಅಕ್ಟೋಬರ್ 23ರಂದು ಬಿಡುಗಡೆಗೊಳಿಸಿದೆ.
ಹಿಂದಿನ ನೀತಿಯನ್ವಯ, ಓರ್ವ ವ್ಯಕ್ತಿಯು ಉದ್ಯೋಗ ವೀಸಾ ಪಡೆಯಲು ಅರ್ಹ ಎನ್ನುವುದು ಒಮ್ಮೆ ಮನವರಿಕೆಯಾದರೆ, ಅವರ ವೀಸಾ ಅವಧಿಯನ್ನು ಹೆಚ್ಚಿನ ಸಂದರ್ಭಗಳಲ್ಲಿ ವಿಸ್ತರಿಸಲಾಗುತ್ತಿತ್ತು.
ಇನ್ನು, ಪ್ರತೀ ವೀಸಾ ವಿಸ್ತರಣೆ ಸಂದರ್ಭದಲ್ಲೂ ತಾವು ವಿಸ್ತರಣೆಗೆ ಅರ್ಹ ಎಂಬುದನ್ನು ಅರ್ಜಿದಾರರು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ.







