ಜಗತ್ತಿನ 75 ಶೇ. ಜನರ ಧಾರ್ಮಿಕ ಸ್ವಾತಂತ್ರ ಮೊಟಕು: ವಿಶ್ವಸಂಸ್ಥೆ

ವಿಶ್ವಸಂಸ್ಥೆ, ಅ. 25: ಜಗತ್ತಿನ ಜನಸಂಖ್ಯೆಯ ಪೈಕಿ ಮುಕ್ಕಾಲು ಪಾಲು ಜನರು ಧಾರ್ಮಿಕ ಸ್ವಾತಂತ್ರವನ್ನು ನಿರ್ಬಂಧಿಸುವ ಅಥವಾ ಧರ್ಮ ಅಥವಾ ನಂಬಿಕೆಗೆ ಸಂಬಂಧಿಸಿ ಗರಿಷ್ಠ ಪ್ರಮಾಣದ ಸಾಮಾಜಿಕ ತಾರತಮ್ಯ ಇರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಧಾರ್ಮಿಕ ಹಕ್ಕುಗಳ ವಿಶೇಷ ತನಿಖೆದಾರ ಅಹ್ಮದ್ ಶಾಹಿದ್ ಮಂಗಳವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಾನವಹಕ್ಕುಗಳ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಅಸಹಿಷ್ಣುತೆ ಜಗತ್ತಿನಾದ್ಯಂತ ಹರಡಿಕೊಂಡಿದೆ ಹಾಗೂ ಹೆಚ್ಚುತ್ತಿದೆ ಎಂದರು.
ಈಗ 70ಕ್ಕೂ ಅಧಿಕ ದೇಶಗಳಲ್ಲಿ ದೈವನಿಂದನೆ ನಿಗ್ರಹ ಕಾನೂನುಗಳಿವೆ ಎಂದು ಹೇಳಿದ ಅವರು, ಭಿನ್ನ ಅಭಿಪ್ರಾಯಗಳನ್ನು ದಮನಿಸಲು ಹಾಗೂ ಆ ಮೂಲಕ ಅಂತಾರಾಷ್ಟ್ರೀಯ ಮಾನವಹಕ್ಕುಗಳನ್ನು ಉಲ್ಲಂಘಿಸಲು ಈ ಕಾನೂನುಗಳನ್ನು ಬಳಸಬಹುದಾಗಿದೆ ಎಂದರು.
ದೈವನಿಂದನೆ ನಿಗ್ರಹ ಕಾನೂನುಗಳನ್ನು ರದ್ದುಪಡಿಸುವಂತೆ ಮಾಲ್ದೀವ್ಸ್‌ನ ಮಾಜಿ ರಾಜಕಾರಣಿ ಹಾಗೂ ಮಾನವಹಕ್ಕುಗಳ ಪರಿಣತ ಶಾಹಿದ್ ಈ ದೇಶಗಳನ್ನು ಒತ್ತಾಯಿಸಿದರು.
ಧಾರ್ಮಿಕ ಸ್ವಾತಂತ್ರವನ್ನು ದುರ್ಬಲಗೊಳಿಸುವ ಎಲ್ಲ ಕಾನೂನುಗಳನ್ನು ಹಿಂದಕ್ಕೆ ಪಡೆಯುವಂತೆ ಅವರು ದೇಶಗಳಿಗೆ ಕರೆ ನೀಡಿದರು.







