ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಸರಕಾರಿ ನೌಕರರ ಧರಣಿ

ಮಂಗಳೂರು, ಅ. 25: ಕರ್ನಾಟಕ ರಾಜ್ಯ 6 ನೆ ವೇತನ ಆಯೋಗದ ವರದಿಯನ್ನು 2017ರ ನವೆಂಬರ್ ಅಂತ್ಯದೊಳಗೆ ಪಡೆದು ಆಯೋಗದ ಶಿಾರಸುಗಳನ್ನು ಜಾರಿಗೊಳಿಸಬೇಕು ಹಾಗೂ 2017 ಎಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಶೇ.30ರಷ್ಟು ಮಧ್ಯಂತರ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರಿ ನೌಕರರು ಬುಧವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದ.ಕ.ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್ ಮಾತನಾಡಿ ದೇಶದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ರಾಜ್ಯ ಸರಕಾರಿ ನೌಕರರು ಕನಿಷ್ಠ ವೇತನವನ್ನು ಪಡೆಯುತ್ತಿದ್ದಾರೆ. ಕೇರಳ, ತಮಿಳುನಾಡು ರಾಜ್ಯ ಸರಕಾರಿ ನೌಕರರ ವೇತನಕ್ಕೆ ಹೋಲಿಸಿದರೆ ಕರ್ನಾಟಕದ ಸರಕಾರಿ ನೌಕರರ ವೇತನವು ಶೇ.60ರಷ್ಟು ಕಡಿಮೆ ಇದೆ. ಪ್ರಸ್ತುತ ಹಣದುಬ್ಬರದ ಪ್ರಮಾಣ ಶೇ.4.6ರಷ್ಟಿದ್ದು, ಸರಳ, ಸಾಮಾನ್ಯ ಬದುಕು ನಡೆಸುವುದು ಕಷ್ಟವಾಗಿದೆ. ಆದ್ದರಿಂದ 6ನೆ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಪಡೆದು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರವು ತನ್ನ ನೌಕರರ ವೇತನಕ್ಕೆ ಬಜೆಟ್‌ನಲ್ಲಿ ಶೇ.17.5 ರಷ್ಟು ಮೊತ್ತವನ್ನು ಮಾತ್ರ ತೆಗೆದಿರಿಸಿದೆ. ಕೇರಳದಲ್ಲಿ ಸಂಪೂನ್ಮೂಲದ ಕೊರತೆ ಇದ್ದರೂ ಬಜೆಟ್‌ನ ಶೇ.30ರಷ್ಟನ್ನು ಸರಕಾರಿ ನೌಕರರ ವೇತನಕ್ಕೆ ಮೀಸಲಿಡುತ್ತದೆ. ಕರ್ನಾಟಕ ಸರಕಾರ ತನ್ನ ನೌಕರರಿಗೆ ಪರಿಷ್ಕೃತ ವೇತನ ಪಾವತಿಸಲು 5,000 ಕೋ.ರೂ.ಮಾತ್ರ ಹೆಚ್ಚುವರಿಯಾಗಿ ಬೇಕಾಗುತ್ತದೆ. 1.50 ಲಕ್ಷ ಕೋ.ರೂ. ಮೊತ್ತದ ಬಜೆಟ್ ಮಂಡಿಸುವ ರಾಜ್ಯ ಸರಕಾರಕ್ಕೆ ಇದೊಂದು ದೊಡ್ಡ ಹೊರೆ ಆಗಲಾರದು ಎಂದು ಪ್ರಕಾಶ್ ನಾಯಕ್ ಹೇಳಿದರು.
ಡಿ ಗ್ರೂಪ್ ನೌಕರರ ಸಂಘದ ಗೌರವಾಧ್ಯಕ್ಷ ರಮೇಶ್ ಕಿರೋಡಿಯನ್, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೀಟಾ ಡೇಸಾ, ಖಜಾಂಚಿ ಗೋಪಾಲಕೃಷ್ಣ, ಉಪಾಧ್ಯಕ್ಷರಾದ ಪಿ.ಕೆ. ಕೃಷ್ಣ, ಎಂ.ಬಿ. ದೇವದಾಸ್, ಆ್ಯಗ್ನೆಲ್ ಪಿಂಟೊ, ರಾಜ್ಯ ಪರಿಷತ್ ಸದಸ್ಯ ಡಾಲ್ಫಿ ಸಿಕ್ವೇರಾ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಜಯಂತ್ ಉಪಸ್ಥಿತರಿದ್ದರು.







