ಆಹಾರ ಉತ್ಪಾದನಾ ವಲಯದಲ್ಲಿ ತಂತ್ರಜ್ಞಾನ: ಡಾ.ಸದಾನಂದ ಮಯ್ಯ
ಮಂಗಳೂರು: ವಿಶ್ವ ಆಹಾರ ದಿನಾಚರಣೆ

ಮಂಗಳೂರು, ಅ.25: ಆಹಾರ ಉತ್ಪಾದನಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ ಎಂದು ಮಯ್ಯಿಸ್ ಫುಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ. ಸದಾನಂದ ಮಯ್ಯ ಹೇಳಿದರು.
ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಹಾರ ಉತ್ಪಾದನಾ ವಲಯದಲ್ಲಿ ತಂತ್ರಜ್ಞಾನ ಬದಲಾವಣೆಯಾಗುತ್ತಿದೆ. ಹಿಂದಿದ್ದ ತಂತ್ರಜ್ಞಾನ ಇಂದಿಲ್ಲ. ಹಿಂದೆಲ್ಲಾ ಹಿಟ್ಟು ರುಬ್ಬಲು ತುಂಬಾ ಕಷ್ಟವಿತ್ತು. ಆದರೆ ಇಂದು ನೂತನ ತಂತ್ರಜ್ಞಾನ ವ್ಯವಸ್ಥೆ ಬಂದ ಬಳಿಕ ಅವು ಸುಲಭವಾಗಿದೆ ಎಂದು ಸದಾನಂದ ಮಯ್ಯ ನುಡಿದರು.
ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ, ಆಹಾರ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳಾಗುತ್ತಿದೆ. ಮನುಷ್ಯನಿಗೆ ಆಹಾರದಲ್ಲಿ ಸಮತೋಲನ ಕಂಡುಕೊಳ್ಳುವುದು ಮುಖ್ಯ. ಭಾರತದಲ್ಲಿ ಇಂದಿಗೂ ಹಸಿವು ಮುಕ್ತವಾಗಿಲ್ಲ. ಅನೇಕರಿಗೆ ಆಹಾರ ಸಿಗುತ್ತಿಲ್ಲ ಎಂದರು.
ವೇದಿಕೆಯಲ್ಲಿ ಉಪಪ್ರಾಂಶುಪಾಲ ಡಾ. ರಿಚರ್ಡ್ ಗಾನ್ಸೋಲ್ವೇಸ್, ಆಹಾರ ವಿಜ್ಞಾನ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಸ್.ಎನ್. ರಾಘವೇಂದ್ರ, ರಿಜಿಸ್ಟಾರ್ ಎ.ಆರ್. ನರಹರಿ, ಸಂಯೋಜಕ ಡಾ. ರಾಜೇಶ್ ಗೌಡ ಉಪಸ್ಥಿತರಿದ್ದರು.







