ಅ.26: ಸಂತ ಅಲೋಶಿಯಸ್ ಕೌಶಲ್ಯಾಭಿವೃದ್ಧಿ ಕೇಂದ್ರ ಉದ್ಘಾಟನೆ
ಮಂಗಳೂರು, ಅ.25: ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯು ಜಾಗ್ವಾರ್ ಗ್ರೂಪ್ ಸಹಭಾಗಿತ್ವದಲ್ಲಿ ಸಂತ ಅಲೋಶಿಯಸ್ ಕೌಶಲ್ಯಾಭಿವೃದ್ಧಿ ಕೇಂದ್ರದ ಉದ್ಘಾಟನೆಯನ್ನು ಅ.26ರಂದು ಸಂಜೆ 3 ಗಂಟೆಗೆ ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ವಿನ್ಸೆಂಟ್ ಮೆಂಡೋನ್ಸಾ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1981ರಿಂದ ಸಂಸ್ಥೆಯು ಸಾವಿರಾರು ಯುವ ಸಮುದಾಯಕ್ಕೆ ಕೈಗಾರಿಕಾ ತರಬೇತಿ ನೀಡಿ ಉತ್ತಮ ಕೌಶಲ್ಯಭರಿತ ಜೀವನ ರೂಪಿಸಲು ಭದ್ರ ಬುನಾದಿ ಹಾಕಿದೆ. ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಪೂರಕ ಮಾಹಿತಿ ಜತೆಗೆ ಪ್ರತ್ಯಕ್ಷ ಪ್ರಾಯೋಗಿಕ ತರಬೇತಿ ನೀಡುವ ದೃಷ್ಠಿಯಿಂದ ಹಲವಾರು ವೃತ್ತಿ ತರಬೇತಿಗಳನ್ನು ಪ್ರತಿಷ್ಠಿತ ಕಂಪೆನಿಗಳ ಸಹಯೋಗದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ವಿನ್ಸೆಂಟ್ ಮೆಂಡೋನ್ಸಾ ಹೇಳಿದರು.
ಇದರ ಅಂಗವಾಗಿ ಪ್ಲಂಬರ್, ಸ್ಯಾನಿಟರಿ ಟೆಕ್ನಾಲಜಿ ವೃತ್ತಿಯಲ್ಲಿ ಪ್ರತಿಷ್ಠಿತ ಕಂಪೆನಿಯಾದ ಜಾಗ್ವಾರ್ ಗ್ರೂಪ್ ಸಹಭಾಗಿತ್ವದಲ್ಲಿ ಒಪ್ಪಂದವನ್ನು ಮಾಡಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನದ ವಿವಿಧ ಪ್ಲಂಬಿಂಗ್ ಉಪಕರಣಗಳನ್ನು ತಯಾರಿಸುವ ಜಾಗ್ವಾರ್ ಕಂಪೆನಿಯು ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಸಾಮಾಜಿಕ ಜವಾಬ್ದಾರಿ ನೆಲೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಸಲುವಾಗಿ ಹಾಗೂ ಗ್ರಾಮೀಣ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡಿ ಕೌಶಲ್ಯ ಅಭಿವೃದ್ಧಿ ಮಾಡಲು ಸಹಕಾರಿಯಾಗುವಂತೆ ಒಪ್ಪಂದ ಮಾಡಿಕೊಂಡಿದೆ ಎಂದು ವಿನ್ಸೆಂಟ್ ಮೆಂಡೋನ್ಸಾ ನುಡಿದರು.
ಒಂದು ತಂಡದಲ್ಲಿ 30 ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವರ್ಷಕ್ಕೆ 100 ಮಂದಿಯನ್ನು ತರಬೇತುಗೊಳಿಸುವ ಗುರಿಯನ್ನು ಹೊಂದಲಾಗಿದೆ. ಶೇ.90 ಹಾಜರಾತಿ ಹಾಗೂ ಉತ್ತಮ ಲಿತಾಂಶ ನೀಡಿ ಉತ್ತೀರ್ಣರಾದವರಿಗೆ ಸಮವಸ ಮತ್ತು ಸಲಕರಣೆಗಳನ್ನು ಉಚಿತವಾಗಿ ನೀಡಲಾಗುವುದು ಹಾಗೂ ಉದ್ಯೋಗ ಖಾತರಿಯನ್ನು ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ಪಾಲ್ಗೊಳ್ಳಲಿದ್ದು, ಸಂತ ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ರೆ.ಫಾ. ಡೈನೀಶಿಯಸ್ ವಾಸ್ ಅಧ್ಯಕ್ಷತೆ ವಹಿಸಲಿರುವರು ಎಂದು ತಿಳಿಸಿದರು.
ಉಪಪ್ರಾಂಶುಪಾಲ ರೋಶನ್ ಡಿ ಸೋಜ, ಕಾರ್ಯಕ್ರಮ ಸಂಯೋಜಕ ರೋಮಿಯಸ್ ಡಿ ಸೋಜ, ಜಾಗ್ವಾರ್ ಕಂಪೆನಿ ಏರಿಯಾ ಸೇಲ್ಸ್ ಮ್ಯಾನೇಜರ್ ಲಕ್ಷ್ಮೆಕಾಂತ್ ಪೂಜಾರಿ ಉಪಸ್ಥಿತರಿದ್ದರು.







