ಮಗುವಿನ ಮೃತದೇಹ ನಾಪತ್ತೆಯಾದ ಶೆರಿನ್‌ಳದ್ದು: ಖಚಿತಪಡಿಸಿದ ಪೊಲೀಸರು

ವಾಶಿಂಗ್ಟನ್, ಅ. 25: ಅಮೆರಿಕದ ರಿಚರ್ಡ್‌ಸನ್‌ನ ಚರಂಡಿಯೊಂದರಲ್ಲಿ ಪತ್ತೆಯಾದ ಮಗುವಿನ ದೇಹವನ್ನು 15 ದಿನಗಳ ಹಿಂದೆ ನಾಪತ್ತೆಯಾದ ಮೂರು ವರ್ಷದ ಶೆರಿನ್ ಮ್ಯಾಥ್ಯೂಸ್‌ದ್ದೆಂದು ಮಂಗಳವಾರ ಗುರುತಿಸಲಾಗಿದೆ.
ಪಾಟ್ನಾದ ಅನಾಥಾಶ್ರಮವೊಂದರಿಂದ ಎರಡು ವರ್ಷಗಳ ಹಿಂದೆ ಕೇರಳ ಮೂಲದ ಅಮೆರಿಕ ಪ್ರಜೆ ವೆಸ್ಲಿ ಮ್ಯಾಥ್ಯೂಸ್ ಮತ್ತು ಆತನ ಹೆಂಡತಿ, ಶೆರಿನ್‌ಳನ್ನು ದತ್ತು ತೆಗೆದುಕೊಂಡಿದ್ದರು.
ಮಗುವಿಗೆ ಹಾನಿ ಮಾಡಿದ ಆರೋಪದಲ್ಲಿ 37 ವರ್ಷದ ವೆಸ್ಲಿಯನ್ನು ಪೊಲೀಸರು ಎರಡನೆ ಬಾರಿಗೆ ಬಂಧಿಸಿದ್ದಾರೆ.
ರವಿವಾರ ಪತ್ತೆಯಾದ ಮಗುವಿನ ಶವದ ಗುರುತನ್ನು ಡಲ್ಲಾಸ್ ಕೌಂಟಿ ಮೆಡಿಕಲ್ ಎಕ್ಸಾಮಿನರ್, ದಂತ ದಾಖಲೆಗಳ ಆಧಾರದಲ್ಲಿ ಪತ್ತೆಹಚ್ಚಿದರು. ಸಾವಿಗೆ ಕಾರಣ ಇನ್ನೂ ಗೊತ್ತಾಗಿಲ್ಲ.
ಹಾಲು ಕುಡಿಯಲು ನಿರಾಕರಿಸಿದ ಶೆರಿನ್‌ಗೆ ಶಿಕ್ಷೆಯಾಗಿ ತಾನು ಅಕ್ಟೋಬರ್ 7ರಂದು ಮುಂಜಾನೆ 3 ಗಂಟೆಗೆ ಮನೆಯ ಎದುರು ಭಾಗದಲ್ಲಿರುವ ಮರವೊಂದರ ಕೆಳಗೆ ನಿಲ್ಲುವಂತೆ ಹೇಳಿದೆ ಹಾಗೂ 15 ನಿಮಿಷದ ಬಳಿಕ ನೋಡಿದಾಗ ಅವಳು ಅಲ್ಲಿರಲಿಲ್ಲ ಎಂಬುದಾಗಿ ವೆಸ್ಲಿ ಅಕ್ಟೋಬರ್ 7ರಂದು ಹೇಳಿಕೆ ನೀಡಿದ್ದನು.
ಬಳಿಕ, ಸೋಮವಾರ ತನ್ನ ವಕೀಲರ ಜೊತೆಗೆ ಪೊಲೀಸ್ ಠಾಣೆಗೆ ಬಂದ ವೆಸ್ಲಿ, ತನ್ನ ಮೊದಲಿನ ಹೇಳಿಕೆಗೆ ವಿರುದ್ಧವಾಗಿ ಹೇಳಿಕೆಯೊಂದನ್ನು ನೀಡಿದನು. ಹಾಲು ಕುಡಿಯುತ್ತಿದ್ದಾಗ ಶೆರಿನ್‌ಗೆ ಉಸಿರುಗಟ್ಟಿತು ಹಾಗೂ ಆಕೆ ಮೃತಪಟ್ಟ ಬಳಿಕ ದೇಹವನ್ನು ವಿಲೇವಾರಿ ಮಾಡಿದೆ ಎಂದು ತನ್ನ ಎರಡನೆ ಹೇಳಿಕೆಯಲ್ಲಿ ಆತ ಹೇಳಿದ್ದನು.
ಮಗುವಿಗೆ ಮರುಗಿದ ಜನತೆ
ಮೂರು ವರ್ಷದ ಭಾರತೀಯ ಮಗು ಶೆರಿನ್ ಮ್ಯಾಥ್ಯೂಸ್‌ಳ ಸಾವಿಗೆ ರಿಚರ್ಡ್‌ಸನ್ ಜನತೆ ಸಂತಾಪ ವ್ಯಕ್ತಪಡಿಸಿದೆ.
ಮಗು ಹಾಲು ಕುಡಿಯುತ್ತಿದ್ದಾಗ ಉಸಿರುಗಟ್ಟಿ ಸತ್ತಿದೆ ಎಂಬುದಾಗಿ ಮಗುವಿನ ದತ್ತು ತಂದೆ ಹೇಳಿಕೆ ನೀಡಿದ್ದರೆ, ಮಗು ಉಸಿರಾಡಲು ಕಷ್ಟಪಡುತ್ತಿದ್ದಾಗ ಆತ ತನ್ನ ನರ್ಸ್ ಹೆಂಡತಿಯನ್ನು ಯಾಕೆ ಎಬ್ಬಿಸಲಿಲ್ಲ ಎಂದು ಹೆಚ್ಚಿನವರು ಪ್ರಶ್ನಿಸಿದ್ದಾರೆ.
ಮಗುವಿನ ಸಾವಿಗೆ ಕಾರಣ ಇನ್ನಷ್ಟೇ ಗೊತ್ತಾಗಬೇಕಾದರೂ, ಟೆಕ್ಸಾಸ್ ರಾಜ್ಯಾದ್ಯಂತ ಜನರು ಆಘಾತಕ್ಕೊಳಗಾಗಿದ್ದಾರೆ.
ನೋಂದಾಯಿತ ನರ್ಸ್ ಆಗಿರುವ ವೆಸ್ಲಿಯ ಹೆಂಡತಿ ಸಿನಿ ಮ್ಯಾಥ್ಯೂಸ್ ಮಗುವಿಗೆ ಸಹಾಯ ಮಾಡಬಹುದಾಗಿತ್ತು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಘಟನೆ ನಡೆಯುವಾಗ ಸಿನಿ ತನ್ನ ಕೋಣೆಯಲ್ಲಿ ಮಲಗಿದ್ದರು ಎನ್ನಲಾಗಿದೆ.







