ಅ.29: ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣೆ
ಮಂಗಳೂರು, ಅ.25: ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ಕುಂಡಾವು ವತಿಯಿಂದ ಯಜಮಾನ ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ ಅ.29ರಂದು ಇರಾ ಶ್ರೆ ಸೋಮನಾಥೇಶ್ವರ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ನಡೆಯಲಿದೆ ಎಂದು ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ್ ರೈ ಕುಕ್ಕುವಳ್ಳಿ ಹೇಳಿದರು.
ಬುಧವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಂಕುತಿಟ್ಟಿನ ಯಕ್ಷಗಾನ ರಂಗಕ್ಕೆ ಗೌರವ ತಂದುಕೊಟ್ಟ ಕಲ್ಲಾಡಿ ವಿಠಲ ಶೆಟ್ಟಿ ಯಕ್ಷಗಾನ ವಲಯದಲ್ಲಿ ಯಜಮಾನ ಎಂದು ಪ್ರಸಿದ್ಧರಾದವರು. ಅವರ ಸವಿನೆನಪಿಗಾಗಿ ಅಭಿಮಾನಿಗಳು ಸ್ಥಾಪಿಸಿದ ಟ್ರಸ್ಟ್ ಮೂಲಕ ಕಲಾವಿದರಿಗೆ ಆರ್ಥಿಕ ಸಹಾಯ, ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಯಕ್ಷಗಾನ ತರಬೇತಿಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ ಪ್ರತಿವರ್ಷ ಸಂಸ್ಮರಣೆ ಮತ್ತು ಯಕ್ಷಗಾನ ಬಯಲಾಟಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.
ಕವಿ ಮುದ್ದಣ ಪ್ರಕಾಶನದ ಗೌರವಾಧ್ಯಕ್ಷ ನಂದಳಿಕೆ ಬಾಲಚಂದ್ರ ರಾವ್ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ್ ರೈ ಕುಕ್ಕುವಳ್ಳಿ ದಿ.ಕಲ್ಲಾಡಿ ವಿಠಲ ಶೆಟ್ಟರ ಕುರಿತು ಸಂಸ್ಮರಣಾ ಭಾಷಣ ಮಾಡಲಿರುವರು. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ಅವರನ್ನು ಸನ್ಮಾನಿಸಲಾಗುವುದು. ಸಂಜೆ 5 ಗಂಟೆಯಿಂದ ತೆಂಕುತಿಟ್ಟಿನ ಕಲಾವಿದರಿಂದ ಪ್ರಮೀಳಾರ್ಜುನ- ತಾಮ್ರಧ್ವಜ- ವೀರವರ್ಮ ಯಕ್ಷಗಾನ ಬಯಲಾಟ ಜರಗಲಿರುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಜಗದೀಶ್ ಶೆಟ್ಟಿ ಇರಾಗುತ್ತು, ಕಾರ್ಯದರ್ಶಿ ಜಯರಾಮ ಪೂಜಾರಿ ಸೂತ್ರಬೆಟ್ಟು, ಸುರೇಶ್ ಕೊಟ್ಟಾರಿ, ಸುಂದರ ಶೆಟ್ಟಿ ಉಪಸ್ಥಿತರಿದ್ದರು.







