ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು, ಅ.25: ಶಿವಾನಂದ ವೃತ್ತದ ಬಳಿಯ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಈ ಕುರಿತಂತೆ ಕುಮಾರ ಪಾರ್ಕ್ ಪೂರ್ವ ಭಾಗದ ನಿವಾಸಿ ಬಿ.ಪಿ.ಮಹೇಶ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ವಕೀಲ ಅಶೋಕ ಬಿ.ಪಾಟೀಲ, ಮೇಲ್ಸೇತುವೆ ನಿರ್ಮಾಣದಿಂದ ಪ್ರಯೋಜನವಿಲ್ಲ. ಇದರಿಂದ ಶೇಷಾದ್ರಿಪುರಂ ಕಡೆ ಸಾಗುವ ಮಾರ್ಗದ ತುದಿಯಲ್ಲಿ ಮತ್ತಷ್ಟು ವಾಹನ ದಟ್ಟಣೆ ಹೆಚ್ಚುತ್ತದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ಇದು ಎರಡನೇ ಸುತ್ತಿನ ವ್ಯಾಜ್ಯ. ಈಗಾಗಲೇ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಅರ್ಜಿದಾರರ ಅಹವಾಲು ಆಲಿಸಿ ವಿಚಾರಣೆ ನಡೆಸಲು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗೆ ನಿರ್ದೇಶಿಸಿದೆ. ಹೀಗಿರುವಾಗ ಮತ್ತೆ ಈ ಅರ್ಜಿ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ರಮೇಶ್, ಈ ಹಿಂದಿನ ಅರ್ಜಿಯಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಎರಡು ತಿಂಗಳಿನಲ್ಲಿ ವಿಚಾರಣೆ ಮುಗಿಸಬೇಕು ಎಂದು ವಿಭಾಗೀಯ ನ್ಯಾಯಪೀಠ ನಿರ್ದೇಶನ ನೀಡಿದೆ. ಆದರೂ ನೀವು ವಿಚಾರಣೆ ನಡೆಸಿಲ್ಲ. ಹೀಗಾಗಿ, ಈ ಯೋಜನೆಗೆ ತಡೆ ನೀಡುತ್ತೇನೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊನ್ನಣ್ಣ, ಇದು 2012ರಲ್ಲಿ ಒಪ್ಪಿಗೆ ಪಡೆದಿರುವ ಯೋಜನೆ. ಇದೇ ವರ್ಷದ ಜೂನ್‌ನಲ್ಲಿ ಮಂಜೂರಾತಿ ಪಡೆದಿದೆ. ಈಗಾಗಲೇ ಕಾಮಗಾರಿ ನಡೆಸಲು ಟೆಂಡರ್ ಪೂರ್ಣಗೊಳಿಸಲಾಗಿದೆ. ಹಣವೂ ಬಿಡುಗಡೆ ಆಗಿದೆ. ಅರ್ಜಿದಾರರು ಈಗ ಹೈಕೋರ್ಟ್ ಮೆಟ್ಟಿಲು ತುಳಿದಿದ್ದಾರೆ ಎಂದು ಹೇಳಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇದೇ 28ಕ್ಕೆ ಅರ್ಜಿದಾರರ ಅಹವಾಲು ಆಲಿಸಿ ವಿಚಾರಣೆ ನಡೆಸಬೇಕು. ನವೆಂಬರ್ 2ಕ್ಕೆ ಅಂತಿಮ ಆದೇಶ ಪ್ರಕಟಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿದರು.







