ಕೆಎಟಿ ಮುಖ್ಯಸ್ಥರಿಗೆ 90 ಸಾವಿರ ರೂ. ವೇತನ ನೀಡಲು ಕೋರಿ ಅರ್ಜಿ ಸಲ್ಲಿಕೆ: ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಅ.25: ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ(ಕೆಎಟಿ) ಮುಖ್ಯಸ್ಥರಿಗೆ ಮಾಸಿಕ 80 ಸಾವಿರ ರೂ. ಬದಲಾಗಿ 90 ಸಾವಿರ ರೂ. ವೇತನ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೆಎಟಿ ಹಾಲಿ ಅಧ್ಯಕ್ಷರೂ ಆದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಕೆ.ಭಕ್ತವತ್ಸಲ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಡಾ.ಕೆ.ಭಕ್ತವತ್ಸಲ ಅವರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮಹಾ ಲೇಖಪಾಲಕರ ಪರವಾಗಿ ನೋಟಿಸ್ ಸ್ವೀಕರಿಸಲು ಸರಕಾರಿ ವಕೀಲೆ ಸಾವಿತ್ರಮ್ಮಗೆ ಸೂಚಿಸಿದರು. ಹಾಗೆಯೇ, ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಪಿಂಚಣಿ ಇಲಾಖೆಗೆ ನೋಟಿಸ್ ಜಾರಿ ಮಾಡಿತು.
2015ರ ಡಿ.15ರಿಂದ ಅಂದರೆ ತಾವು ಕೆಎಟಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ತಮಗೆ ಮಾಸಿಕ 90 ಸಾವಿರ ರೂ. ಪಾವತಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಆದೇಶಿಸುವಂತೆ ಡಾ.ಕೆ.ಭಕ್ತವತ್ಸಲ ಅವರು ಕೋರಿದ್ದಾರೆ. ಜತೆಗೆ, ಈ ಅರ್ಜಿ ಇತ್ಯರ್ಥವಾಗುವವರೆಗೂ ತಮಗೆ ಮಾಸಿಕ 90 ಸಾವಿರ ರೂ.ವೇತನ ಪಾವತಿಸಲು ಆದೇಶಿಸುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.





