ದ.ಕ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸದ್ಭಾವನಾ ಉಪವಾಸ ಸತ್ಯಾಗ್ರಹ
ಮಂಗಳೂರು, ಅ.25: ಕರಾವಳಿ ಜಿಲ್ಲೆಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಅಸಹಿಷ್ಣುತೆ , ಧಾರ್ಮಿಕ ಮೂಲಭೂತವಾದ ,ಜಾತಿವಾದ, ಹಿಂಸೆ , ಕೋಮುವಾದಿ ಚಟುವಟಿಕೆಗಳು, ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅ.31ರಿಂದ ಡಿ.6ರವರೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸದಾಭವನಾ ಉಪವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಅಕ್ಟೋಬರ್ 31 ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಿಧನರಾದ ದಿನದಂದು ತೊಕ್ಕೊಟ್ಟಿನಲ್ಲಿ ಸದ್ಭಾವನ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ನವೆಂಬರ್ 13ರಂದು ಸುಳ್ಯದಲ್ಲಿ ಅಂತಾರಾಷ್ಟ್ರೀಯ ಕಾರುಣ್ಯ ದಿನದ ಆಚರಣೆ, ನವೆಂಬರ್ 16ರಂದು ಅಂತರಾಷ್ಟ್ರೀಯ ಸಹಿಷ್ಣುತೆಯ ದಿನಾಚರಣೆ ಪುತ್ತೂರಿನಲ್ಲಿ , ನವೆಂಬರ್ 26ರಂದು ಸಂವಿಧಾನ ದಿನವನ್ನು ಬಂಟ್ವಾಳದಲ್ಲಿ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಂಡ ದಿನ, ಅಂಬೇಡ್ಕರ್ ನಿಧನದಂದು ಮಂಗಳೂರಿನ ಪುರಭವನದ ಎದುರು ಹಾಗೂ ಮೇಲಿನ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಸದ್ಭಾವನಾ ಉಪವಾಸ ನಡೆಯಲಿದೆ ಎಂದು ಪಿ.ವಿ.ಮೋಹನ್ ತಿಳಿಸಿದ್ದಾರೆ.
ಕರಾವಳಿ ಕರ್ನಾಟಕದಲ್ಲಿ ಜನರ ನೆಮ್ಮದಿಯನ್ನು ಕೆಡಿಸುತ್ತಿರುವ ವಾತವರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಾತಂತ್ರದ ಹೋರಾಟದ ಸಂದರ್ಭದಲ್ಲಿ ಗಾಂಧಿ ಹಾಕಿ ಕೊಟ್ಟ ಸತ್ಯಾಗ್ರಹವನ್ನು ಮತ್ತೆ ಜನರಿಗೆ ನೆನಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸೌರ್ಹಾದತೆಯ ವಾತವರಣ ಶಾಶ್ವತವಾಗಿ ನೆಲೆಗೊಳ್ಳಲು ಗಾಂಧೀಜಿಯ ಪ್ರಾರ್ಥನೆಯಂತೆ ಸಬ್‌ಕೋ ಸನ್‌ಮತಿ ದೇ ಭಗವಾನ್ ಇದರ ಪ್ರಕಾರ ಸನ್ಮತಿ ಬಿತ್ತುವ ಪ್ರಯತ್ನದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೊಹನ್ ತಿಳಿಸಿದ್ದಾರೆ.
ನ.19ಕ್ಕೆ ಚಿಕ್ಕಮಗಳೂರಿಗೆ ರಾಹುಲ್ ಗಾಂಧಿ:- ದಕ್ಷಿಣ ಕನ್ನಡವನ್ನು ಸೇರಿಕೊಂಡಂತೆ ಇದ್ದ ಹಿಂದಿನ ಚಿಕ್ಕ ಮಗಳೂರು ಲೋಕ ಸಭಾ ಕ್ಷೇತ್ರ ಇಂದಿರಾ ಗಾಂಧಿಯನ್ನು ಲೋಕಸಭೆಗೆ ಆರಿಸಿ ಕಳುಹಿಸಿದ ಕ್ಷೇತ್ರ. ಈ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಭೇಟಿ ನೀಡಿದ್ದ ಕೆಲವು ಪ್ರದೇಶಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ನ.19ರಂದು ಅಲ್ಲಿಗೆ ಆಗಮಿಸಲಿದ್ದಾರೆ . ಈ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪಿ.ವಿ ಮೋಹನ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಮೋಹನ್ ನಂಬಿಯಾರ್, ಯುವ ಕಾಂಗ್ರೆಸ್ ಪದಾಧಿಕಾರಿಗಲಾದ ಸುಮಿತ್ ಡೇಸಾ, ಲುಕ್ಮಾನ್ ಬಂಟ್ವಾಳ, ಶೈಲೇಶ್ ಕೊಟ್ಟಾರಿ, ನವೀದ್ ಅಖ್ತರ್, ಕರಾವಳಿ ವಿಭಾಗದ ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಯು.ಬಿ.ಅಬ್ದುಲ್ ಸಲೀಮ್, ಜಿಲ್ಲಾ ಯುವ ಇಂಟಕ್ ಅಧ್ಯಕ್ಷ ದಿಕ್ಷಿತ್ ವಿ.ಶೆಟ್ಟಿ, ಉಳ್ಳಾಲ ನಗರ ಸಭಾ ಸದಸ್ಯ ಉಸ್ಮಾನ್ ಕಲ್ಲಾಪು, ಅಸೈಗೋಳಿ ಗ್ರಾಮ ಪಂಚಾಯತ್ ಸದಸ್ಯ ನಝರ್ ಶಾ ಪಟ್ಟೋರಿ ಮೊದಲಾದವರು ಉಪಸ್ಥಿತರಿದ್ದರು.







