ಪ್ರತ್ಯೇಕ ನಿವೇಶನ, ಮನೆ ನೀಡುವಂತೆ ಒತ್ತಾಯಿಸಿ ಅಲಮಾರಿ ಜನಾಂಗದಿಂದ ಧರಣಿ

ಮೈಸೂರು, ಅ.25: ನಗರದ ಏಕಲವ್ಯನಗರ ನಿವಾಸಿಗಳಿಗೆ ನಿವೇಶನ ಹಾಗೂ ಪ್ರತ್ಯೇಕ ಮನೆಗಳನ್ನು ನೀಡುವಂತೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ ಯುಸಿಐ) ಕಾರ್ಯಕರ್ತರು ಹಾಗೂ ನಿವಾಸಿಗಳು ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಿದರು.
ಈ ವೇಳೆ ಧರಣಿನಿರತರರು ಮಾತನಾಡಿ, ಬಳ್ಳಾರಿಯ ಗುಡಾರ ನಗರ ಮಾದರಿಯಲ್ಲಿ ನಮಗೂ ಪ್ರತ್ಯೇಕ ನಿವೇಶ ಹಾಗೂ ಮನೆಯನ್ನು ಮಂಜೂರು ಮಾಡಬೇಕು. ಈಗಾಗಲೇ ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕಾಗಿ ಚಾಲ್ತಿಯಲ್ಲಿರುವ ಯೋಜನೆಯಲ್ಲಿ ಪ್ರತ್ಯೇಕ ನಿವೇಶನ, ಮನೆ ಮಂಜೂರು ಮಾಡಬೇಕು. ತಕ್ಷಣಕ್ಕೆ ಗುಡಿಸಲುಗಳ ಹಾನಿಯನ್ನು ಪರಿಗಣಿಸಿ ಮರು ನಿರ್ಮಾಣಕ್ಕೆ ಸೂಕ್ತ ಪರಿಹಾರ ಅಥವಾ ಆರ್ಥಿಕ ಸಹಾಯ ನೀಡಬೇಕು. ಡೆಂಗ್, ಚಿಕನ್ ಗುನ್ಯಾದಂತಹ ಸಾಂಕ್ರಮಿಕ ರೋಗಗಳಿಂದ ಗ್ರಾಮದ ನಿವಾಸಿಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯ ವ್ಯವಸ್ಥೆ ಮಾಡಬೇಕು. ಏಕಲವ್ಯನಗರ ಗ್ರಾಮಕ್ಕೆ ಪೌರಕಾರ್ಮಿಕರನ್ನು ನಿಯೋಜಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಗವಿರಂಗಪ್ಪ, ಚಿದಾನಂದ, ಪ್ರಕಾಶ್, ವಾಸು, ಭಾಗ್ಯಮ್ಮ, ಕೃಷ್ಣಪ್ಪ, ಮಲ್ಲೇಶಪ್ಪ, ಚಂದ್ರಶೇಖರ್, ಉಮಾದೇವಿ, ಮುದ್ದುಕೃಷ್ಣ, ಬಸವರಾಜು, ಸಂಧ್ಯಾ ಇತರರು ಪಾಲ್ಗೊಂಡಿದ್ದರು.





