ಬೆಳೆ ಸಮೀಕ್ಷೆ ಕಾರ್ಯ ತ್ವರಿತಗೊಳಿಸಿ: ಅಧಿಕಾರಿಗಳಿಗೆ ಡಿಸಿ ಲೋಕೇಶ್ ಸೂಚನೆ

ಶಿವಮೊಗ್ಗ, ಅ. 25: ಬೆಳೆ ಸಮೀಕ್ಷೆ ಕಾರ್ಯದಲ್ಲಿ ಶಿವಮೊಗ್ಗ ಜಿಲ್ಲೆಯು ರಾಜ್ಯದಲ್ಲಿ 5ನೆ ಸ್ಥಾನದಲ್ಲಿದ್ದು, ಸಮೀಕ್ಷೆ ಕಾರ್ಯವನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಬೆಳೆ ಸಮೀಕ್ಷೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ಕಾಗಿ 441 ಕಂದಾಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟು 1,615 ಗ್ರಾಮಗಳಲ್ಲಿ 4,97,541 ಜಮೀನುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದ್ದು, ನಿಗದಿತ ಅವಧಿಯ ಒಳಗಾಗಿ ಬೆಳೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೀರ್ಥಹಳ್ಳಿ ಸೇರಿದಂತೆ ಕೆಲವು ತಾಲೂಕುಗಳ ಕಂದಾಯ ಅಧಿಕಾರಿಗಳು ತಾಲೂಕು ಕೇಂದ್ರಸ್ಥಾನದಲ್ಲಿ ವಾಸವಿರದೆ ಜಿಲ್ಲಾಕೇಂದ್ರದಿಂದ ಪ್ರತಿನಿತ್ಯ ಓಡಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಎಲ್ಲಾ ಕಂದಾಯ ಅಧಿಕಾರಿಗಳು ಕಡ್ಡಾಯವಾಗಿ ತಾಲೂಕು ಕೇಂದ್ರದಲ್ಲಿ ವಾಸವಿರಬೇಕು. ಕೇಂದ್ರಸ್ಥಾನದಲ್ಲಿರದ ಕಂದಾಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಶಿವಮೊಗ್ಗ ಉಪವಿಬಾಗಾಧಿಕಾರಿ ಕೃಷ್ಣಮೂರ್ತಿ, ಎಲ್ಲಾ ತಾಲೂಕು ತಹಶೀಲ್ದಾರ್‌ಗಳು, ಕಂದಾಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.





