ವಿಷನ್-2025: ಪತ್ರಕರ್ತರಿಂದ ಸಲಹೆ
ಮಡಿಕೇರಿ, ಅ.25: ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಸರಕಾರವು ವಿಷನ್-2025 ಡಾಕ್ಯುಮೆಂಟ್ ಹೆಸರಿನಲ್ಲಿ ನೀಲನಕ್ಷೆ ಮತ್ತು ಅನುಷ್ಠಾನ ಕಾರ್ಯ ಯೋಜನೆ ಸಿದ್ಧಪಡಿಸುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಪತ್ರಕರ್ತರಿಂದ ಸಲಹೆ, ಅಭಿಪ್ರಾಯ ಪಡೆಯಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಪತ್ರಕರ್ತ ಜಿ.ಚಿದ್ವಿಲ್ವಾಸ್ ಅವರು 2025 ವಿಷನ್ ಸಂಬಂಧಿಸಿದಂತೆ ಮಾಹಿತಿ ನೀಡಿ, ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಸ್ತವ್ಯ ಹೂಡುವಂತಾಗಲು ವಸತಿ ಸಂಕೀರ್ಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತರಾದ ಅನಿಲ್ ಎಚ್.ಟಿ., ಐತಿಚಂಡ ರಮೇಶ್ ಉತ್ತಪ್ಪ, ಮಂಜುನಾಥ, ಮನುಶೆಣೈ, ಶ್ರೀಧರ ನೆಲ್ಲಿತ್ತಾಯ, ಚಂದ್ರಮೋಹನ್, ಬಿ.ಸಿ.ದಿನೇಶ್, ಸವಿತಾ ರೈ, ಕೊಡಗು ಆನಂದ್, ಚಿ.ನಾ.ಸೋಮೇಶ್ ಸಲಹೆ ನೀಡಿದರು.
ಮಾಹಿತಿ ಪಡೆಯುವುದಕ್ಕೂ ಮೊದಲು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ವಿಷನ್-2025 ಡಾಕ್ಯುಮೆಂಟ್ ರೂಪುರೇಷೆ ಸಂಬಂಧ ಹಲವು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್‌ಕುಮಾರ್ ಪಾಲ್ಗೊಂಡಿದ್ದರು.





