ಮಾಜಿ ಅಧ್ಯಕ್ಷ ಬುಶ್‌ರಿಂದ ಲೈಂಗಿಕ ಕಿರುಕುಳ: ನಟಿ ಆರೋಪ
ಕ್ಷಮೆ ಯಾಚಿಸಿದ 93 ವರ್ಷದ ಸೀನಿಯರ್ ಬುಶ್

ನ್ಯೂಯಾರ್ಕ್, ಅ. 25: ಚಿತ್ರಪ್ರದರ್ಶನವೊಂದರ ವೀಕ್ಷಣೆಗೆ ಬಂದಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್. ಡಬ್ಲು. ಬುಶ್ ತನ್ನ ಗಾಲಿಕುರ್ಚಿಯಿಂದಲೇ ನನ್ನ ಮೈ ಸವರಿದ್ದಾರೆ ಎಂಬುದಾಗಿ ನಟಿ ಹೆದರ್ ಲಿಂಡ್ ಆರೋಪಿಸಿದ್ದಾರೆ. ಅದರ ಬೆನ್ನಿಗೇ, ಮಾಜಿ ಅಧ್ಯಕ್ಷರು ನಟಿಯೊಂದಿಗೆ ಕ್ಷಮೆ ಕೋರಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ‘ಟರ್ನ್: ವಾಶಿಂಗ್ಟನ್ಸ್ ಸ್ಪೈಸ್’ ಎಂಬ ಟಿವಿ ಸರಣಿಯ ಪ್ರದರ್ಶನ ಕಾರ್ಯಕ್ರಮವೊಂದು ನಡೆದಿದ್ದಾಗ ಈ ಘಟನೆ ಸಂಭವಿಸಿದೆ ಎಂದು ನಟಿ ಹೇಳಿದ್ದಾರೆ ಎಂದು ‘ಡೇಲಿ ಮೇಲ್’ ವರದಿ ಮಾಡಿದೆ.
ಅಮೆರಿಕದ ಚಂಡಮಾರುತ ಪೀಡಿತ ಜನರಿಗಾಗಿ ಏರ್ಪಡಿಸಲಾದ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ 93 ವರ್ಷದ ಬುಶ್ ಸೀನಿಯರ್ ಭಾಗವಹಿಸಿದ್ದನ್ನು ನೋಡಿದ ಬಳಿಕ ಈ ಘಟನೆಯನ್ನು ಹೊರಗೆಡಹಲು ತಾನು ನಿರ್ಧರಿಸಿದೆ ಎಂದು ಲಿಂಡ್ ಹೇಳಿದ್ದಾರೆ.
‘‘ಅವರು ನನ್ನ ಕೈ ಕುಲುಕಲಿಲ್ಲ. ಅವರು ತನ್ನ ಗಾಲಿಕುರ್ಚಿಯಿಂದ ನನ್ನನ್ನು ಹಿಂಬದಿಯಿಂದ ಮುಟ್ಟಿದರು. ಅವರ ಹೆಂಡತಿ ಬಾರ್ಬರಾ ಬುಶ್ ಅವರ ಜೊತೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಅವರು ನನಗೊಂದು ಕೊಳಕು ಜೋಕೊಂದನ್ನು ಹೇಳಿದರು’’ ಎಂದರು.
ಕ್ಷಮೆ ಯಾಚಿಸಿದ ಬುಶ್
‘ಡೇಲಿ ಮೇಲ್’ ಮತ್ತು ‘ನ್ಯೂಯಾರ್ಕ್ ಡೇಲಿ ನ್ಯೂಸ್’ಗೆ ನೀಡಿದ ಹೇಳಿಕೆಯೊಂದರಲ್ಲಿ, ಬುಶ್ ವಕ್ತಾರರೊಬ್ಬರು ಈ ಆರೋಪವನ್ನು ನಿರಾಕರಿಸಲಿಲ್ಲ. ಆದರೆ, ಅದೊಂದು ತಮಾಶೆಯ ಕೆಟ್ಟ ಪ್ರಯತ್ನವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
‘‘ಅಧ್ಯಕ್ಷ ಬುಶ್ ಉದ್ದೇಶಪೂರ್ವಕವಾಗಿ ಯಾರಿಗೂ ತೊಂದರೆ ಕೊಡುವವರಲ್ಲ. ಅವರ ತಮಾಶೆಯ ಪ್ರಯತ್ನದಿಂದ ಲಿಂಡ್‌ಗೆ ನೋವಾಗಿದ್ದರೆ ಅವರು ಅತ್ಯಂತ ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತಾರೆ’’ ಎಂದು ಹೇಳಿಕೆ ತಿಳಿಸಿದೆ.







