ಸಂಧಾನಕಾರರ ನಿಯೋಜನೆ ಸೇನಾ ಕಾರ್ಯಾಚರಣೆ ಮೇಲೆ ಪ್ರಭಾವ ಬೀರದು: ಸೇನಾ ವರಿಷ್ಠ ಬಿಪಿನ್ ರಾವತ್

ಹೊಸದಿಲ್ಲಿ, ಅ. 25: ಜಮ್ಮು-ಕಾಶ್ಮೀರದ ಸಮಸ್ಯೆ ಪರಿಹರಿಸಲು ಸಂಧಾನಕಾರರನ್ನು ನಿಯೋಜಿಸುವುದರಿಂದ ರಾಜ್ಯದಲ್ಲಿ ಸೇನಾ ಕಾರ್ಯಾಚರಣೆ ಮೇಲೆ ಯಾವುದೇ ಪ್ರಭಾವ ಬೀರದು ಎಂದು ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.
ಭಯೋತ್ಪಾದನೆಯಿಂದ ಸಂತ್ರಸ್ತವಾದ ರಾಜ್ಯದಲ್ಲಿ ಪ್ರಮುಖರೊಂದಿಗೆ ಮಾತುಕತೆ ನಡೆಸಲು ಐಬಿಯ ಮಾಜಿ ನಿರ್ದೇಶಕ ದಿನೇಶ್ವರ್ ಶರ್ಮಾ ಅವರನ್ನು ಸರಕಾರ ನಿಯೋಜಿಸಿದೆ.
“ಸರಕಾರ ಅವರನ್ನು ನಿಯೋಜಿಸಿದೆ. ಅವರು ಕಾರ್ಯನಿರ್ವಹಿಸಲಿದ್ದಾರೆ. ಸೇನಾ ಕಾರ್ಯಾಚರಣೆಗೆ ಇದರಿಂದ ಯಾವುದೇ ತೊಂದರೆ ಆಗಲಾರದು. ಕಣಿವೆಯಲ್ಲಿ ಪರಿಸ್ಥಿತಿ ಸುಧಾರಿಸಿದೆ. ಒಳನುಸುಳುವಿಕೆ ಇಳಿಕೆಯಾಗುತ್ತಿದೆ” ಎಂದು ರಾವತ್ ಹೇಳಿದರು.
ಕಾಶ್ಮೀರದ ಕುರಿತು ಕೇಂದ್ರ ಸರಕಾರದ ಕಾರ್ಯತಂತ್ರ ಯಶಸ್ವಿಯಾಗುತ್ತಿದೆ ಎಂದು ರಾವತ್ ಹೇಳಿದ್ದಾರೆ.
ತಾನು ಮಾತುಕತೆ ಆರಂಭಿಸುವ ಮುನ್ನ ಈ ಹಿಂದಿನ ಸಂಧಾನಕಾರರು ಮಾಡಿದ ಕೆಲಸವನ್ನು ಮೊದಲು ಪರಿಶೀಲಿಸುತ್ತೇನೆ ಎಂದು ಶರ್ಮಾ ತಿಳಿಸಿದ್ದಾರೆ.
ಯಾವ ಶಿಫಾರಸು ಮಾಡಲಾಗಿದೆ, ಏನಾಗಿದೆ ಎಂಬ ಬಗ್ಗೆ ಈ ಹಿಂದಿನ ಸಮಿತಿ ಹಾಗೂ ಸಂಧಾನಕಾರರು ಸಿದ್ಧಪಡಿಸಿದ ವರದಿಯನ್ನು ನಾನು ಪರಿಶೀಲಿಸುತ್ತೇನೆ. ಬಳಿಕ ಕಾಶ್ಮೀರದ ಜನರನ್ನು ಭೇಟಿಯಾಗುತ್ತೇನೆ. ಇದೆಲ್ಲ ಆದ ಬಳಿಕ ಈ ವಿಶೇಷ ಪ್ರತಿನಿಧೀಕರಣ ಹೇಗೆ ಭಿನ್ನ ಎಂಬುದನ್ನು ನಾನು ಹೇಳಬಹುದು ಎಂದು ಶರ್ಮಾ ಹೇಳಿದ್ದಾರೆ.







