ಎ.ಕೆ. ಸುಬ್ಬಯ್ಯಗೆ ‘ಪೆರಿಯಾರ್’ ಪ್ರಶಸ್ತಿ ಪ್ರದಾನ

ಮಡಿಕೇರಿ, ಅ.25: ಕನ್ನಡ ನಾಡಿನ ಹಿರಿಯ ವಿಚಾರವಾದಿ, ಕರ್ನಾಟಕ ವಿಧಾನ ಪರಿಷತ್‌ನ ಪ್ರತಿ ಪಕ್ಷದ ಮಾಜಿ ನಾಯಕ, ಕೊಡಗಿನ ಎ.ಕೆ. ಸುಬ್ಬಯ್ಯ ಅವರಿಗೆ ಕರ್ನಾಟಕ ಮಾನವ ಬಂದುತ್ವ ವೇದಿಕೆಯ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ‘ಪೆರಿಯಾರ್ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ‘ಮಹಾತ್ಮ ಪೆರಿಯಾರ್ ಅವರ 138ನೆ ಜನ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಎ.ಕೆ. ಸುಬ್ಬಯ್ಯ ಅವರಿಗೆ ಪ್ರತಿಷ್ಟಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎ.ಕೆ. ಸುಬ್ಬಯ್ಯ, ಪೆರಿಯಾರ್ ಅವರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಪಡೆಯಲು ತಾವೆಷ್ಟು ಅರ್ಹರು ಎಂಬ ಬಗ್ಗೆ ತಮಗೆ ತಿಳಿದಿಲ್ಲ. ಆದರೆ, ಪೆರಿಯಾರ್ ಅವರ ಆದರ್ಶ ಮತ್ತು ವಿಚಾರಧಾರೆ ಇಂದಿನ ಪ್ರಜ್ಞಾವಂತ ಸಮಾಜಕ್ಕೆ ಅತ್ಯಗತ್ಯವಾಗಿದೆ. ಸಮಾಜದಲ್ಲಿ ಮೌಡ್ಯವೆಂಬ ಭೂತ ರಾರಾಜಿಸುತ್ತಿದ್ದು, ಮನುಷ್ಯನ ಮೆದುಳನ್ನು ಬಂಧಿಸಿ ಬೀಗ ಜಡಿಯಲಾಗಿದೆ. ಹಿಂಸೆ, ಕೋಮುವಾದ, ಮತಾಂಧತೆ, ಮೂಲಭೂತವಾದ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಪೆರಿಯಾರ್ ಅವರ ವಿಚಾರಧಾರೆ ಅತ್ಯಂತ ಮಹತ್ವ ಮತ್ತು ಯೋಗ್ಯವಾದದ್ದು ಎಂದು ಹೇಳಿದರು.
ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಸಾಹಿತಿ ಡಾ. ಸಿದ್ದಲಿಂಗಯ್ಯ, ಸಮಾಜದಲ್ಲಿ ಪೆರಿಯಾರ್ ಅವರ ವಿಚಾರಧಾರೆಯ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ವಿಚಾರವಾದಿಗಳ ಪೈಕಿ ಎ.ಕೆ. ಸುಬ್ಬಯ್ಯ ಅವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಎಂದೂ ಅಧಿಕಾರ ಬಯಸದ ಸುಬ್ಬಯ್ಯ ಅವರು, ತಮ್ಮ ವಿಚಾರಧಾರೆ ಹಾಗೂ ವ್ಯಕ್ತಿತ್ವದ ಮೂಲಕ ಜನ ಮಾನಸದಲ್ಲಿ ಸ್ಥಾನ ಪಡೆದುಕೊಂಡು ಇಂದಿಗೂ ಪ್ರಚಲಿತದಲ್ಲಿರುವುದು ಅವರ ಶ್ರೇಷ್ಟ ಚಿಂತನೆಗೆ ಹಿಡಿದ ಕೈಗನ್ನಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಕಾಳೇಗೌಡ ನಾಗವಾರ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ವಸುಂಧರಾ ಭೂಪತಿ, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಹೇಶ್ ಚಂದ್ರಗುರು, ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್, ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳಾದ ವಿಲ್ಫೆರ್ಡ್‌ಡಿಸೋಜ, ರವೀಂದ್ರ ನಾಯ್ಕರ್, ಆರ್.ಜಯಕುಮಾರ್, ಬೀರಿಹುಂಡಿ ಬಸವಣ್ಣ, ಎಚ್.ಸಿ. ಬಸವರಾಜು, ಕಲ್ಕುಣಿಕೆ ಬಸವರಾಜು ಮುಂತಾದವರು ಉಪಸ್ಥಿತರಿದ್ದರು.







