ದಾವಣಗೆರೆ: ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಧರಣಿ

ದಾವಣಗೆರೆ, ಅ.25: ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಅಂಗೀಕರಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಬುಧವಾರ ಧರಣಿ ನಡೆಸಿದವು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ವಿವಿಧ ರಸ್ತೆಗಳ ಮುಖಾಂತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗುತ್ತಾ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿತು.
ಈ ಸಂದರ್ಭ ಮಾತನಾಡಿದ ಡಿಎಸ್ಸೆಸ್ ಜಿಲ್ಲಾಧ್ಯಕ್ಷ ಎನ್. ಮಲ್ಲೇಶ್ ಕುಕ್ಕವಾಡ, ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಸಲ್ಲಿಕೆಯಾಗಿ 5 ವರ್ಷವಾಗುತ್ತಿದ್ದು, ಅದನ್ನು ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಿ, ಸಂವಿಧಾನದ ತಿದ್ದುಪಡಿಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಹಿಂದುಳಿದ ವರ್ಗಗಳ ಅಧ್ಯಕ್ಷ ಕಾಂತರಾಜ್ ಆಯೋಗದ ವರದಿ ಅನುಷ್ಠಾನಗೊಳಿಸಿ, ಎಲ್ಲಾ ಜಾತಿಗಳಿಗೆ ಆಯಾ ಜಾತಿಯ ಜನಸಂಖ್ಯೆ ಆದರಿಸಿ, ಜಾತಿವಾರು ಮೀಸಲಾತಿ ಕಲ್ಪಿಸಬೇಕು. ರಾಜ್ಯಾದ್ಯಂತ ಭೂ ರಹಿತ ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ, ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದ ಅವರು, ಪರಿಶಿಷ್ಟ ರಾಜ್ಯ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ವಿರುದ್ಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ 15 ಸಾವಿರ ಪರಿಶಿಷ್ಟ ನೌಕರರು ಹಿಂಭಡ್ತಿ ಹೊಂದುವ ಆತಂಕದಲ್ಲಿದ್ದಾರೆ. ಪರಿಶಿಷ್ಟ ನೌಕರರ ಬಡ್ತಿ ಮುಂದುವರಿಸಲು ಸರ್ಕಾರ ತಂದಿರುವ ನೂತನ ಮಸೂದೆಯನ್ನುಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಿ, ಸುಗ್ರೀವಾಜ್ಞೆ ಜಾರಿಗೊಳಿಸಲಿ ಎಂದು ಒತ್ತಾಯಿಸಿದರು.
ಮೀಸಲಾತಿ ಪ್ರಮಾಣ ಶೇ. 50ರಿಂದ 70ಕ್ಕೆ ಹೆಚ್ಚಿಸಬೇಕು. ಪರಿಶಿಷ್ಟ ಜಾತಿ-ವರ್ಗಗಳ ಜನಸಂಖ್ಯೆ ಆದರಿಸಿ, ಮೀಸಲಾತಿಯನ್ನು ಶೇ. 18ರಿಂದ 25ಕ್ಕೆ ಹೆಚ್ಚಿಸಬೇಕು. ರಾಜ್ಯ ಸರ್ಕಾರದಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ಪೌರ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹಾಸ್ಟೆಲ್ ಮತ್ತು ಬಿಸಿಯೂಟ ಅಡುಗೆ ತಯಾರಕರು, ದಿನಗೂಲಿಗಳು ಹಾಗೂ ಗ್ರಾಪಂ, ತಾಪಂ, ಜಿಪಂ ದಿನಗೂಲಿ ನೌಕರರನ್ನು ಖಾಯಂಗೊಳಿಸಬೇಕು ಎಂದು ಮನವಿ ಮಾಡಿದರು.
ಧರಣಿಯಲ್ಲಿ ಸಂಘಟನೆ ಮುಖಂಡರಾದ ಎನ್.ಎಂ. ಹನುಮಂತಪ್ಪ, ತಾಪಂ ಸದಸ್ಯ ಆಲೂರು ನಿಂಗರಾಜ, ಎಚ್.ಮಲ್ಲೇಶ, ಸಿ.ಬಸವರಾಜ, ಹೆಗ್ಗೆರೆ ರಂಗಪ್ಪ, ಕುಂದುವಾಡ ಮಂಜುನಾಥ, ಎಚ್.ಸಿ. ಗುಡ್ಡಪ್ಪ, ಜಿ.ಎಚ್. ಶಂಭುಲಿಂಗಪ್ಪ, ಜೆ.ಅಮಾನುಲ್ಲಾ ಖಾನ್, ಖಾದರ್ ಬಾಷಾ, ರೇಣುಕಾ ಯಲ್ಲಮ್ಮ, ತಮ್ಮಣ್ಣ ಹೊನ್ನಾಳಿ, ಎ. ಶ್ರೀನಿವಾಸ, ಪಿ.ಯಲ್ಲಪ್ಪ, ಶಬ್ಬೀರ್ ಸಾಬ್, ದುಗ್ಗಪ್ಪ, ವಿಜಯಕುಮಾರ, ಮಂಜು ಮಾರಿಕೊಪ್ಪ, ನನ್ನು ಸಾಬ್, ಡಾ.ವಿಶ್ವನಾಥ, ಕುಬೇರಪ್ಪ ಹರಪನಹಳ್ಳಿ, ಎನ್.ಮಂಜುನಾಥ ಯರಗುಂಟೆ, ಸಾವಿತ್ರಮ್ಮ, ಎಸ್. ಮಲ್ಲಿಕಾರ್ಜುನ, ಉಚ್ಚಂಗಿ ಪ್ರಸಾದ್ ಮತ್ತಿತರರಿದ್ದರು.







