ಇಂಗ್ಲೆಂಡ್-ಸ್ಪೇನ್ ವಿಶ್ವಕಪ್ ಫೈನಲ್‌ಗೆ

ಮುಂಬೈ, ಆ.25: ಇಂಗ್ಲೆಂಡ್ ಹಾಗೂ ಸ್ಪೇನ್ ತಂಡಗಳು ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದು, ಅ.28 ರಂದು ಕೋಲ್ಕತಾದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟ್ರೋಫಿಗಾಗಿ ಹೋರಾಟ ನಡೆಸಲಿವೆ. ಬುಧವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಬ್ರೆಝಿಲ್ ತಂಡವನ್ನು 3-1 ಅಂತರದಿಂದ ಮಣಿಸಿದರೆ, ಎರಡನೆ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡ ಕೂಡ ಮಾಲಿ ತಂಡವನ್ನು 3-1 ಅಂತರದಿಂದ ಮಣಿಸಿತು.
ಅಬೆಲ್ ರುಯಿಝ್ ಅವಳಿ ಗೋಲುಗಳು(19,43ನೆ ನಿಮಿಷ) ಹಾಗೂ ಫೆರ್ರಾನ್ ಟೊರ್ರೆಸ್‌ರ ಒಂದು ಗೋಲು(71ನೆ ನಿಮಿಷ) ನೆರವಿನಿಂದ ಸ್ಪೇನ್ ತಂಡ ಮಾಲಿ ತಂಡಕ್ಕೆ ಸೋಲುಣಿಸಿ ಫೈನಲ್‌ಗೆ ಸ್ಥಾನ ಗಿಟ್ಟಿಸಿಕೊಂಡಿತು.
ಸತತ ಎರಡನೆ ಬಾರಿ ಫೈನಲ್‌ಗೆ ತಲುಪಬೇಕೆಂಬ ಮಾಲಿ ತಂಡದ ಕನಸು ಭಗ್ನಗೊಂಡಿತು. ಮಾಲಿ ಪರ ಎನ್‌ಡಿಯಾಯೆ 74ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು. 10ನೆ ನಿಮಿಷದಲ್ಲಿ ಗೋಲು ಬಾರಿಸಿದ ರುಯಿಝ್ ಯುರೋಪಿಯನ್ ಚಾಂಪಿಯನ್‌ಗೆ ಉತ್ತಮ ಆರಂಭ ನೀಡಿದರು. 43ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ರುಯಿಝ್ ಸ್ಪೇನ್ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.
ಅ.28 ರಂದು ಸಂಜೆ 5 ಗಂಟೆಗೆ 3ನೆ ಸ್ಥಾನಕ್ಕಾಗಿ ನಡೆಯಲಿರುವ ಪ್ಲೇ-ಆಫ್ ಪಂದ್ಯದಲ್ಲಿ ಬ್ರೆಝಿಲ್ ಹಾಗೂ ಮಾಲಿ ತಂಡಗಳು ಸೆಣಸಾಡಲಿವೆ.
ಬ್ರೆವ್‌ಸ್ಟರ್ ಹ್ಯಾಟ್ರಿಕ್: ರಿಯಾನ್ ಬ್ರೆವ್‌ಸ್ಟರ್ ಬಾರಿಸಿದ ಹ್ಯಾಟ್ರಿಕ್ ಗೋಲು ನೆರವಿನಿಂದ ಇಂಗ್ಲೆಂಡ್ ತಂಡ ಫಿಫಾ ಅಂಡರ್-17 ವಿಶ್ವಕಪ್ ಪಂದ್ಯದಲ್ಲಿ ಬ್ರೆಝಿಲ್ ತಂಡವನ್ನು 3-1 ಅಂತರದಿಂದ ಮಣಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಬುಧವಾರ ಇಲ್ಲಿನ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ 63,881 ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಬ್ರೆವ್‌ಸ್ಟರ್ 10ನೆ, 39ನೆ ಹಾಗೂ 77ನೆ ನಿಮಿಷದಲ್ಲಿ ಗೋಲು ಬಾರಿಸಿ ಇಂಗ್ಲೆಂಡ್‌ನ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಬ್ರೆವ್‌ಸ್ಟರ್ ಸತತ ಎರಡನೆ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿ ಗಮನ ಸೆಳೆದರು. ಅ.21 ರಂದು ನಡೆದ ಅಮೆರಿಕ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಹ್ಯಾಟ್ರಿಕ್ ಗೋಲು(11,14, 90+6 ನಿಮಿಷ)ಬಾರಿಸಿದ್ದ ಬ್ರೆವ್‌ಸ್ಟರ್ ಟೂರ್ನಿಯಲ್ಲಿ ಒಟ್ಟು ಏಳು ಗೋಲುಗಳನ್ನು ಬಾರಿಸಿದ್ದಾರೆ. ಬ್ರೆಝಿಲ್‌ನ ಪರ ಇಂದಿನ ಪಂದ್ಯದಲ್ಲಿ ವೆಸ್ಲೇ 21ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದ್ದಾರೆ.
ಲಿವರ್‌ಪೂಲ್ ಕ್ಲಬ್‌ನ ಸ್ಟ್ರೈಕರ್ ಬ್ರೆವ್‌ಸ್ಟರ್ 10ನೆ ನಿಮಿಷದಲ್ಲಿ ಇಂಗ್ಲೆಂಡ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. 21ನೆ ನಿಮಿಷದಲ್ಲಿ ಗೋಲು ಬಾರಿಸಿದ ಬ್ರೆಝಿಲ್‌ನ ವೆಸ್ಲೇ ಸ್ಕೋರನ್ನು 1-1 ಸಮಬಲಗೊಳಿಸಿದರು.
39ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಬ್ರೆವ್‌ಸ್ಟರ್ ಮೊದಲಾರ್ಧದಲ್ಲಿ ಇಂಗ್ಲೆಂಡ್ ತಂಡ 2-1 ರಿಂದ ಮುನ್ನಡೆ ಸಾಧಿಸಲು ನೆರವಾದರು. 77ನೆ ನಿಮಿಷದಲ್ಲಿ ಮೂರನೆ ಗೋಲು ಬಾರಿಸಿದ ಬ್ರೆವ್‌ಸ್ಟರ್ ಇಂಗ್ಲೆಂಡ್ 3-1 ರಿಂದ ಜಯ ಸಾಧಿಸಿ ಫೈನಲ್‌ಗೆ ತಲುಪಲು ನೆರವಾದರು. ಕೋಲ್ಕತಾದಲ್ಲಿ 3 ಗ್ರೂಪ್ ಪಂದ್ಯಗಳು ಹಾಗೂ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿರುವ ಇಂಗ್ಲೆಂಡ್ ಸೆಮಿಫೈನಲ್‌ನಲ್ಲೂ ಗೆಲುವಿನ ಓಟ ಮುಂದುವರಿಸಿದೆ.







