ರಣಜಿ ಟ್ರೋಫಿ: ಕರ್ನಾಟಕ ಮೇಲುಗೈ

ಶಿವಮೊಗ್ಗ, ಅ.25: ಹೈದರಾಬಾದ್ ವಿರುದ್ಧ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಮೇಲುಗೈ ಸಾಧಿಸಿದೆ.
ಎರಡನೆ ದಿನವಾದ ಬುಧವಾರ ಕರ್ನಾಟಕ ತಂಡ 2ನೆ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 127 ರನ್ ಗಳಿಸಿದ್ದು, ಒಟ್ಟು 174 ರನ್ ಮುನ್ನಡೆಯಲ್ಲಿದೆ. ಐದನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 70 ರನ್ ಸೇರಿಸಿರುವ ಕರುಣ್ ನಾಯರ್(ಅಜೇಯ 37,75 ಎಸೆತ, 5 ಬೌಂಡರಿ) ಹಾಗೂ ಸ್ಟುವರ್ಟ್ ಬಿನ್ನಿ(ಅಜೇಯ 26,67 ಎಸೆತ, 4 ಬೌಂಡರಿ)ತಂಡಕ್ಕೆ ಆಸರೆಯಾಗಿದ್ದಾರೆ.
ಹೈದರಾಬಾದ್‌ನ ಎಡಗೈ ಸ್ಪಿನ್ನರ್ ಮೆಹದಿ ಹಸನ್(4-54) ದಾಳಿಗೆ ತತ್ತರಿಸಿದ ಕರ್ನಾಟಕ 57 ರನ್‌ಗೆ ಅಗ್ರ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಜೊತೆಯಾದ ನಾಯರ್-ಬಿನ್ನಿ ಜೋಡಿ ಬ್ಯಾಟಿಂಗ್‌ನ್ನು ಮೂರನೆ ದಿನಕ್ಕೆ ಕಾಯ್ದಿರಿಸಿದ್ದಾರೆ.
ಹೈದರಾಬಾದ್ 136 ರನ್‌ಗೆ ಆಲೌಟ್: ಇದಕ್ಕೆ ಮೊದಲು 5 ವಿಕೆಟ್‌ಗಳ ನಷ್ಟಕ್ಕೆ 111 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಹೈದರಾಬಾದ್ ನಿನ್ನೆಯ ಮೊತ್ತಕ್ಕೆ ಕೇವಲ 25 ರನ್ ಸೇರಿಸುವಷ್ಟರಲ್ಲಿ ಕೊನೆಯ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಜೀವನಶ್ರೇಷ್ಠ ಬೌಲಿಂಗ್ ಮಾಡಿದ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್(5-17) ಹೈದರಾಬಾದ್‌ನ ಕೊನೆಯ ಐದು ವಿಕೆಟ್‌ಗಳನ್ನು ಬಾಚಿಕೊಂಡರು.
ಹೈದರಾಬಾದ್‌ನ ಪರ ಕರ್ನಾಟಕ ಮೂಲದ ವಿಕೆಟ್‌ಕೀಪರ್ ಕೆ. ಸುಮಂತ್ 150 ಎಸೆತಗಳಲ್ಲಿ 68 ರನ್ ಗಳಿಸಿ ಏಕಾಂಗಿ ಹೋರಾಟ ನೀಡಿದರು. ಆಕಾಶ್ ಭಂಡಾರಿ(24), ಅಕ್ಷತ್ ರೆಡ್ಡಿ(13)ಎರಡಂಕೆಯ ಸ್ಕೋರ್ ದಾಖಲಿಸಿದರು.
ಕರ್ನಾಟಕದ ಪರ ಎಸ್.ಗೋಪಾಲ್ ಯಶಸ್ವಿ ಬೌಲರ್ ಎನಿಸಿಕೊಂಡರು. ಕೆ.ಗೌತಮ್(3-56) ಮೂರು ವಿಕೆಟ್‌ಗಳನ್ನು ಕಬಳಿಸಿದರು.
ಭಾರತದ ಟೆಸ್ಟ್ ಕ್ರಿಕೆಟಿಗ ಕೆ.ಎಲ್. ರಾಹುಲ್(23) ಪಂದ್ಯದಲ್ಲಿ ಎರಡನೆ ಬಾರಿಯೂ ಬ್ಯಾಟಿಂಗ್‌ನಲ್ಲಿ ವಿಫಲರಾದರು. ರಾಹುಲ್ ಕರ್ನಾಟಕದ ಎರಡನೆ ಇನಿಂಗ್ಸ್‌ನಲ್ಲಿ ಔಟಾದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು.
18.4ನೆ ಓವರ್‌ನಲ್ಲಿ ರಾಹುಲ್‌ಗೆ ಪೆವಿಲಿಯನ್ ಹಾದಿ ತೋರಿಸಿದ ಹಸನ್ 24.1 ಓವರ್‌ನಲ್ಲಿ ಆರ್.ಸಮರ್ಥ್(29) ವಿಕೆಟ್‌ನ್ನು ಉರುಳಿಸಿದರು. 22 ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯಲು ವಿಫಲವಾದ ಮಯಾಂಕ್ ಅಗರವಾಲ್ ಅವರು ಹಸನ್‌ಗೆ ಮೂರನೆ ಬಲಿಯಾದರು. ಮೂರು ಎಸೆತಗಳ ಬಳಿಕ ಕೆ. ಗೌತಮ್ ಕೂಡ ತನ್ನಖಾತೆಗೆ ಒಂದೂ ರನ್ ಸೇರಿಸದೇ ಹಸನ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡಾದರು.
ನಾಯರ್(ಅಜೇಯ 37) ಹಾಗೂ ಬಿನ್ನಿ(ಅಜೇಯ 26) ಕ್ರೀಸ್ ಕಾಯ್ದುಕೊಂಡಿದ್ದು, ಹೈದರಾಬಾದ್ ಬೌಲರ್ ಹಸನ್ ದಿನದ ಯಶಸ್ವಿ ಬೌಲರ್ ಎನಿಸಿಕೊಂಡರು.







