ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಪಶುವೈದ್ಯರ ಪಾತ್ರ ಮುಖ್ಯ: ಡಾ.ಮುಹಮ್ಮದ್ ಜಫರುಲ್ಲಾಖಾನ್

ತುಮಕೂರು, ಅ.25: ರೈತರ ಆರ್ಥಿಕತೆಯಲ್ಲಿ ಪಶುವೈದ್ಯಕೀಯ ಇಲಾಖೆಯ ಪ್ರಮುಖ ಪಾತ್ರವಿದೆಯೆಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ನಿರ್ದೇಶಕ ಡಾ.ಮುಹಮ್ಮದ್ ಜಫರುಲ್ಲಾಖಾನ್ ಕಿವಿಮಾತು ಹೇಳಿದರು.
ನಗರದ ಎಸ್‌ಎಸ್‌ಐಟಿಯ ಎಂಬಿಎ ಸೆಮಿನಾರ್ ಹಾಲ್‌ನಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘ, ತುಮಕೂರು ಶಾಖೆ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘ ಆಯೋಜಿಸಿದ್ದ ‘ಪಶು ರೋಗಗಳ ನಿಯಂತ್ರಣ ಕುರಿತ ಯೋಜನೆಗಳು ಮತ್ತು ಪಶು ರಕ್ಷಣಾ ಕಾನೂನು’ ಕುರಿತ ತಾಂತ್ರಿಕ ವಿಚಾರ ಸಂಕಿರಣ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಪಶುಗಳು ರೋಗಗಳಿಗೆ ತುತ್ತಾಗದಂತೆ ಪಶುಪಾಲಕರಿಗೆ ಅರಿವು ಮೂಡಿಸಿದರೆ ರೈತರು ಆರ್ಥಿಕತೆಯಲ್ಲಿ ಬಲಾಢ್ಯಗೊಳ್ಳುತ್ತಾನೆ ಎಂದರು.
ಪಶುವೈದ್ಯರ ನಿರಂತರ ಪ್ರಯತ್ನದ ಫಲವಾಗಿ ರಾಜ್ಯದ ಪಶು ಸಂಪತ್ತಿಗೆ ಕಂಟಕವಾಗಿದ್ದ ಕಾಲುಬಾಯಿ ರೋಗವು ಶೇ.98ರಷ್ಟು ಹತೋಟಿಗೆ ಬಂದಿದೆ. ರೈತರಿಗೆ ಪಶುವೈದ್ಯರು ಮತ್ತು ಸಿಬ್ಬಂದಿ ಈ ರೋಗಕ್ಕೆ ಲಸಿಕೆ ಹಾಕುವ ಬಗ್ಗೆ ತಿಳಿ ಹೇಳುವ ಮೂಲಕ ಪ್ರೇರೇಪಿಸಬೇಕಾಗಿದೆ ಎಂದು ತಿಳಿಸಿದರು.
ಪ್ರಾಣಿ ರಕ್ಷಣಾ ಕಾನೂನುಗಳ ಬಗ್ಗೆ ನಾವು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗಿದೆ. ಪಶು ವೈದ್ಯರು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು.ಬಿಡಾಡಿ ಜಾನುವಾರುಗಳ ಬಗ್ಗೆಯೂ ಕಾಳಜಿ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಪಶುವೈದ್ಯಕೀಯ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ವಿ.ಸಿ.ರುದ್ರಪ್ರಸಾದ್, ನ.1ರಿಂದ ರಾಜ್ಯದಲ್ಲಿ 12ನೆ ಸುತ್ತಿನ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ. ಗೋಹತ್ಯೆ ನಿಷೇದ ಕಾನೂನು ಜಾರಿಯ ನಂತರ ಇರುವ ಗೊಂದಲಗಳ ನಿವಾರಣೆ ಕುರಿತು ವಿಚಾರ ಸಂಕಿರಣದಲ್ಲಿ ವಿವರ ನೀಡಲಿದ್ದು, ಇದರ ಲಾಭ ಪಡೆಯುವಂತೆ ತಿಳಿಸಿದರು.
ಈ ಸಂದರ್ಭ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಭಿವೃದ್ದಿ ವಿಭಾಗದ ಅಪರ ನಿರ್ದೇಶಕ ಡಾ.ಎನ್.ಎಸ್.ಪರಮೇಶ್ವರಪ್ಪ, ಶಿಕ್ಷಣ ಮತ್ತು ತರಬೇತಿ ಇಲಾಖೆಯ ಅಪರ ನಿರ್ದೇಶಕ ಡಾ.ಆರ್.ಕೆ.ಚೆಲುವಯ್ಯ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕ ಡಾ.ಎಸ್.ಎಂ.ಭೈರೇಗೌಡ, ಪಶುವೈದ್ಯಕೀಯ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಡಾ.ಜಯಣ್ಣ, ಜಿಲ್ಲಾ ಸಂಘದ ಕಾರ್ಯದರ್ಶಿ ಡಾ.ಎ.ಸಿ.ದಿವಾಕರ್, ಉಪಾಧ್ಯಕ್ಷ ಡಾ.ಎಸ್.ಶಶಿಕಾಂತ್ ಭೂದಿಹಾಳ್, ಜಂಟಿ ಕಾರ್ಯದರ್ಶಿ ಡಾ.ನಂಜೇಗೌಡ, ಖಜಾಂಚಿ ಡಾ ನಾಗಭೂಷಣ್, ಡಾ.ಎಚ್. ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.







