ಕಾವೇರಿ ತಾಲೂಕಿಗೆ ಚೆಟ್ಟಳ್ಳಿ ಸೇರ್ಪಡೆ ಪ್ರಸ್ತಾಪ ಸರಿಯಲ್ಲ: ಮಣಿ ಉತ್ತಪ್ಪ
ಮಡಿಕೇರಿ, ಅ.26: ಕುಶಾಲನಗರವನ್ನು ಕಾವೇರಿ ತಾಲೂಕನ್ನಾಗಿ ರಚಿಸಬೇಕೆಂದು ಹೋರಾಟ ನಡೆಸುತ್ತಿರುವವರು ಚೆಟ್ಟಳ್ಳಿಯನ್ನು ಕಾವೇರಿ ತಾಲೂಕಿಗೆ ಸೇರಿಸಬೇಕೆನ್ನುವ ಬೇಡಿಕೆಯನ್ನು ಮುಂದಿಟ್ಟಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಚೆಟ್ಟಳ್ಳಿ ಜನಪರ ಹೋರಾಟ ಸಮಿತಿಯ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ, ಹೋರಾಟಗಾರರು ಈ ಪ್ರಸ್ತಾಪವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಟ್ಟಳ್ಳಿ ಗ್ರಾಮವನ್ನು ಕಾವೇರಿ ತಾಲೂಕಿಗೆ ಸೇರ್ಪಡೆಗೊಳಿಸಬೇಕೆಂದು ಕಾವೇರಿ ತಾಲೂಕು ಹೋರಾಟ ಸಮಿತಿ ಮಾಡಿರುವ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸುವುದಾಗಿ ತಿಳಿಸಿದರು. ಕಳೆೆದ ಹಲವು ವರ್ಷಗಳಿಂದ ಚೆಟ್ಟಳ್ಳಿ ಗ್ರಾಮವನ್ನು ಮಡಿಕೇರಿ ತಾಲೂಕಿಗೆ ಸೇರಿಸಬೇಕೆಂದು ಒತ್ತಾಯಿಸುತ್ತಲೇ ಬರಲಾಗಿದೆ. ಮಡಿಕೇರಿ ತಾಲೂಕು ಅತ್ಯಂತ ಸಣ್ಣ ತಾಲೂಕಾಗಿದ್ದು, ಚೆಟ್ಟಳ್ಳಿ ಗ್ರಾಪಂ ಸೇರ್ಪಡೆಯಿಂದ ತಾಲೂಕಿನ ಗಾತ್ರ ಹೆಚ್ಚಾಗಲಿದೆ. ಅಲ್ಲದೆ, ಮಡಿಕೇರಿ ಚೆಟ್ಟಳ್ಳಿಗೆ ಸಮೀಪದಲ್ಲೇ ಇದೆ. ಜಿಲ್ಲಾಡಳಿತದ ಕಚೆೇರಿಗಳು ಹಾಗೂ ನ್ಯಾಯಾಲಯ ಜಿಲ್ಲಾ ಕೇಂದ್ರ ಸ್ಥಾನದಲ್ಲೆ ಇರುವುದರಿಂದ ಚೆಟ್ಟಳ್ಳಿಯನ್ನು ಮಡಿಕೆೇರಿ ತಾಲೂಕಿಗೆ ಸೇರ್ಪಡೆಗೊಳಿಸುವುದು ಸೂಕ್ತವೆಂದು ಮಣಿ ಉತ್ತಪ್ಪಅಭಿಪ್ರಾಯಪಟ್ಟರು.
ಕುಶಾಲನಗರ ತಾಲೂಕು ಕೇಂದ್ರವಾದರೆ, ಮೂರು ಬಸ್‌ಗಳನ್ನು ಚೆಟ್ಟಳ್ಳಿ ಗ್ರಾಮಸ್ಥರು ಬದಲಾಯಿಸಿ ಕುಶಾಲನಗರಕ್ಕೆ ತೆರಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದು ಹಿರಿಯ ನಾಗರಿಕರಿಗೆ ತ್ರಾಸದಾಯಕ ಪ್ರಯಾಣವಾಗಲಿದ್ದು, ಚೆಟ್ಟಳ್ಳಿಯನ್ನು ಕಾವೇರಿ ತಾಲೂಕಿಗೆ ಸೇರಿಸಿದ್ದೇ ಆದಲ್ಲಿ ಹಿರಿಯ ನಾಗರಿಕರ ಮೂಲಕವೇ ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಲಾಗುವುದು. ಅಲ್ಲದೆ, ನ್ಯಾಯಾಲಯದ ಮೊರೆ ಹೋಗಲಾಗುವುದೆಂದು ಮಣಿ ಉತ್ತಪ್ಪಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಧನಂಜಯ್ ಹಾಗೂ ಚೆಟ್ಟಳ್ಳಿ ಬಿಜೆಪಿ ಪ್ರಮುಖರಾದ ಬೊಳ್ಳಂಡ ಕಾಶಿ ದೇವಯ್ಯ ಉಪಸ್ಥಿತರಿದ್ದರು.







