ಪತ್ನಿ ಹತ್ಯೆಗೆ ಯತ್ನ: ಪತಿಗೆ 5 ವರ್ಷ ಜೈಲು ಸಜೆ
ಶಿವಮೊಗ್ಗ, ಅ. 26: ಪತ್ನಿಯ ಹತ್ಯೆಗೆ ಯತ್ನಿಸಿದ ಪತಿಗೆ ಜಿಲ್ಲೆಯ ಸಾಗರದ 5 ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷ ಕಠಿಣ ಶಿಕ್ಷೆ ಹಾಗೂ 23 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಸಾಗರದ ಶ್ರೀಧರ ನಗರದ ನಿವಾಸಿ ಗುರುಮೂರ್ತಿ (45) ಶಿಕ್ಷೆಗೊಳಗಾದ ಪತಿ ಎಂದು ಗುರುತಿಸಲಾಗಿದೆ.
ನ್ಯಾಯಾಧೀಶೆ ಮಹೇಶ್ವರಿ ಎಸ್. ಹಿರೇಮಠರವರು ಈ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ 10 ಸಾವಿರ ರೂ. ಪತ್ನಿಗೆ ಪರಿಹಾರ ರೂಪದಲ್ಲಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿ.ಜಿ.ಯಳಗೇರಿಯವರು ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ: ಗುರುಮೂರ್ತಿಯು ಸಾಗರದ ಶ್ರೀಧರ ನಗರದಲ್ಲಿ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೊತೆ ವಾಸಿಸುತ್ತಿದ್ದರು. ಪ್ರತಿನಿತ್ಯ ಮದ್ಯ ಸೇವಿಸಿ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ. ಇದರಿಂದ ರೋಸಿ ಹೋದ ಪತ್ನಿಯು ಪತಿಯನ್ನು ತೊರೆದು ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು.
1-10-2017 ರಂದು ರಾತ್ರಿ 10.30 ಕ್ಕೆ ಮದ್ಯ ಸೇವಿಸಿ ಪತ್ನಿ ಮನೆಗೆ ಆಗಮಿಸಿದ ಗುರುಮೂರ್ತಿಯು ಮತ್ತೆ ಗಲಾಟೆ ಮಾಡಿದ್ದಾನೆ. ಈ ವೇಳೆ ಪತ್ನಿಯ ಕುತ್ತಿಗೆ ಹಿಸುಕಿ ಹತ್ಯೆ ಮಾಡಲು ಮುಂದಾಗಿದ್ದ. ಈ ವೇಳೆ ಬಿಡಿಸಲು ಬಂದ ಮಗಳ ಮೇಲೂ ಹಲ್ಲೆ ನಡೆಸಿದ್ದ. ಈ ಕುರಿತಂತೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಗುರುಮೂರ್ತಿ ವಿರುದ್ದ ಪ್ರಕರಣ ದಾಖಲಾಗಿತ್ತು.
ಪೊಲೀಸರು ಗುರುಮೂರ್ತಿಯನ್ನು ಬಂಧಿಸಿ, ಆತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಕೂಡ ಸಲ್ಲಿಸಿದ್ದರು. ವಿಚಾರಣೆಯಲ್ಲಿ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.







