‘ಭಾರತ ಈಗ ಫುಟ್ಬಾಲ್‌ದೇಶವಾಗಿದೆ’
ಫಿಫಾ ಅಧ್ಯಕ್ಷ ಇನ್ಫಾಂಟಿನೊ

ಕೋಲ್ಕತಾ, ಅ.26: ‘‘ಭಾರತ ಈಗ ಫುಟ್ಬಾಲ್ ದೇಶವಾಗಿ ಹೊರಹೊಮ್ಮಿದೆ’’ ಎಂದು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಡೆಯಲಿರುವ ಫಿಫಾ ಕೌನ್ಸಿಲ್ ಸಭೆ ಹಾಗೂ ಶನಿವಾರ ನಡೆಯಲಿರುವ ಅಂಡರ್-17 ವಿಶ್ವಕಪ್ ಫೈನಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಇನ್ಫಾಂಟಿನೊ ಭಾರತಕ್ಕೆ ಆಗಮಿಸಿದ್ದಾರೆ. ಭಾರತ ಫಿಫಾ ಅಂಡರ್-17 ವಿಶ್ವಕಪ್‌ನ್ನು ಯಶಸ್ವಿಯಾಗಿ ಆಯೋಜಿಸಿರುವ ಬಗ್ಗೆ ಪ್ರತಿಕ್ರಿಯಿಸಿದ 47ರ ಹರೆಯದ ಇನ್ಫಾಂಟಿನೊ,‘‘ಎಲ್ಲ ಭಾರತೀಯರಿಗೆ ತುಂಬು ಹೃದಯದ ಕೃತಜ್ಞತೆಗಳು. ನನಗೆ ಭಾರತಕ್ಕೆ ಆಗಮಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ’’ ಎಂದರು. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಉಪಾಧ್ಯಕ್ಷ ಸುಬ್ರತಾ ದತ್ತ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇನ್ಫಾಂಟಿನೊರನ್ನು ಸ್ವಾಗತಿಸಿದರು.
ಇನ್ಫಾಂಟಿನೊ ಎಐಎಫ್‌ಎಫ್ ಮುಖ್ಯಸ್ಥ ಪ್ರಫುಲ್ ಪಟೇಲ್‌ರೊಂದಿಗೆ ಹೊಟೇಲ್‌ಯೊಂದರಲ್ಲಿ ಸಭೆ ನಡೆಸಲಿದ್ದು ಸಭೆಯಲ್ಲಿ 2019ರಲ್ಲಿ ಭಾರತ ಅಂಡರ್-20 ವಿಶ್ವಕಪ್‌ಗೆ ಬಿಡ್ ಸಲ್ಲಿಕ್ಕೆಗೆ ಸಂಬಂಧಿಸಿ ಚರ್ಚಿಸಲಿದ್ದಾರೆ. ಪ್ರಸ್ತುತ ಅಂಡರ್-17 ವಿಶ್ವಕಪ್‌ನ್ನು ಯಶಸ್ವಿಯಾಗಿ ಆಯೋಜಿಸಿರುವ ಭಾರತಕ್ಕೆ ಅಂಡರ್-20 ವಿಶ್ವಕಪ್ ಆತಿಥ್ಯದ ಹಕ್ಕು ಸಿಗುವ ಸಾಧ್ಯತೆಯಿದೆ. ಆದರೆ, ಫಿಫಾ ಒಂದೇ ದೇಶಕ್ಕೆ ಸತತ ವಿಶ್ವಕಪ್ ಆತಿಥ್ಯದ ಹಕ್ಕನ್ನು ಇದುವರೆಗೆ ನೀಡಿಲ್ಲ. ಶುಕ್ರವಾರ ನಡೆಯಲಿರುವ ಫಿಫಾ ಕೌನ್ಸಿಲ್ ಸಭೆಯಲ್ಲಿ 2018ರಲ್ಲಿ ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ವೀಡಿಯೊ ಅಸಿಸ್ಟೆಂಟ್ ರೆಫರಿ ಟೆಕ್ನಾಲಜಿ ಜಾರಿಗೆ ತರುವ ಸಂಬಂಧ ಚರ್ಚೆಯಾಗುವ ಸಾಧ್ಯತೆಯಿದೆ.
ಪಶ್ಚಿಮಬಂಗಾಳ ಸರಕಾರದ ಅತಿಥಿಯಾಗಿರುವ ಇನ್ಫಾಂಟಿನೊಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೋಜನ ಕೂಟವನ್ನು ಆಯೋಜಿಸಿದ್ದಾರೆ. 35 ಸದಸ್ಯರನ್ನು ಒಳಗೊಂಡ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿರುವ ಇನ್ಫಾಂಟಿನೊ ಇಕೊ ಪಾರ್ಕ್‌ನಲ್ಲಿ ಮಾಜಿ ಫುಟ್ಬಾಲ್ ಆಟಗಾರರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅ.28 ರಂದು ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಗ್ಲೆಂಡ್ ಹಾಗೂ ಸ್ಪೇನ್ ನಡುವಿನ ವಿಶ್ವಕಪ್ ಫೈನಲ್‌ನಲ್ಲಿ ಪ್ರಶಸ್ತಿ ವಿಜೇತ ತಂಡಕ್ಕೆ ಫಿಫಾ ಅಧ್ಯಕ್ಷರು ಪ್ರತಿಷ್ಠಿತ ಅಂಡರ್-17 ವಿಶ್ವಕಪ್‌ನ್ನು ಹಸ್ತಾಂತರಿಸಲಿದ್ದಾರೆ.







