ಅವಳಿ ದಾಖಲೆ ನಿರ್ಮಿಸುವತ್ತ ಭಾರತ ಹೆಜ್ಜೆ

ಹೊಸದಿಲ್ಲಿ, ಅ.26: ಮೊತ್ತ ಮೊದಲ ಬಾರಿ ಅಂಡರ್-17 ವಿಶ್ವಕಪ್ ಆತಿಥ್ಯವಹಿಸಿಕೊಂಡಿರುವ ಭಾರತ ಪ್ರೇಕ್ಷಕರ ಹಾಜರಾತಿ ಹಾಗೂ ಗರಿಷ್ಠ ಗೋಲುಗಳ ವಿಚಾರದಲ್ಲಿ ಅವಳಿ ದಾಖಲೆ ನಿರ್ಮಿಸುವತ್ತ ಹೆಜ್ಜೆ ಇಟ್ಟಿದೆ.
ಪ್ರಸ್ತುತ ದೇಶದ ಆರು ಸ್ಟೇಡಿಯಂಗಳಲ್ಲಿ ನಡೆದ ವಿಶ್ವಕಪ್ ಪಂದ್ಯಗಳನ್ನು ಈತನಕ 12,24,027 ಪ್ರೇಕ್ಷಕರು ವೀಕ್ಷಿಸಿದ್ದಾರೆ. 1985ರಲ್ಲಿ ಚೀನಾದಲ್ಲಿ ನಡೆದ ಮೊದಲ ಆವೃತ್ತಿಯ ವಿಶ್ವಕಪ್‌ನಲ್ಲಿ 12,30,976 ಪ್ರೇಕ್ಷಕರು ಪಂದ್ಯ ವೀಕ್ಷಿಸಿದ್ದರು. ಟೂರ್ನಮೆಂಟ್‌ನಲ್ಲಿ ಇನ್ನೂ ಎರಡು ಪಂದ್ಯಗಳು ನಡೆಯಲು ಬಾಕಿ ಉಳಿದಿದ್ದು, ಅ.28 ರಂದು ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆೆ. ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಗರಿಷ್ಠ ಪ್ರೇಕ್ಷಕರನ್ನು ಸೆಳೆದ ದಾಖಲೆ ನಿರ್ಮಿಸಲು ಭಾರತ ಸಜ್ಜಾಗಿದೆ. 2011ರಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯನ್ನು ಒಟ್ಟು 10,02,314 ಪ್ರೇಕ್ಷಕರು ವೀಕ್ಷಿಸಿದ್ದರು.
ಈ ವರ್ಷದ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಪ್ರೇಕ್ಷಕರ ಹಾಜರಾತಿಯು ಅ.18 ರಂದು ನಡೆದ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ 10 ಲಕ್ಷ ಕ್ರಮಿಸಿತ್ತು. ಕೋಲ್ಕತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಪ್ರತಿ ಪಂದ್ಯದಲ್ಲೂ ಗರಿಷ್ಠ ಸಂಖ್ಯೆಯಲ್ಲಿ ಪ್ರೇಕ್ಷಕರು ಹಾಜರಾಗಿದ್ದರು. 9 ಪಂದ್ಯಗಳಲ್ಲಿ ಒಟ್ಟು 4,85,693 ಪ್ರೇಕ್ಷಕರು ಹಾಜರಾಗಿದ್ದರು. ಸ್ಟೇಡಿಯಂ 66,600 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಅಂಡರ್-17 ವಿಶ್ವಕಪ್‌ನಲ್ಲಿ 50 ಪಂದ್ಯಗಳಲ್ಲಿ 170 ಗೋಲುಗಳು ದಾಖಲಾಗಿದ್ದು, ಯುಎಇನಲ್ಲಿ ನಡೆದಿದ್ದ 2013ರ ವಿಶ್ವಕಪ್‌ನ ಗರಿಷ್ಠ ಗೋಲು ದಾಖಲೆ(172) ಸರಿಗಟ್ಟಲು 2 ಗೋಲುಗಳ ಅಗತ್ಯವಿದೆ.







