ಶಾಸಕ ವಸಂತ ಬಂಗೇರ ಬಿಜೆಪಿಗೆ: ಸತ್ಯಕ್ಕೆ ದೂರ; ಶ್ರೀನಿವಾಸ ವಿ ಕಿಣಿ
ಬೆಳ್ತಂಗಡಿ, ಅ. 26: ಶಾಸಕ ಕೆ ವಸಂತ ಬಂಗೇರ ಅವರು ಬಿಜೆಪಿ ಸೇರಲಿದ್ದಾರೆ ಎಂಬಂತೆ ವದಂತಿಗಳು ಕೆಲವು ಟಿ.ವಿ ಚಾನೆಲ್‌ಗಳಲ್ಲಿ ಹರಿದಾಡುತ್ತಿದ್ದು ಇದು ಬಂಗೇರರನ್ನು ಚುನಾವಣೆಯಲ್ಲಿ ಎದುರಿಸಲು ಶಕ್ತಿಯಿರದ ಹತಾಶರು ಹರಡುವ ಸುದ್ದಿಗಳಾಗಿದ್ದು ಇದೆಲ್ಲವೂ ಸತ್ಯಕ್ಕೆ ದೂರವಾಗಿದೆ ಮುಂದಿನ ಚುನಾವಣೆಯಲ್ಲಿ ವಸಂತ ಬಂಗೇರ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದು, ಅತ್ಯಧಿಕ ಬಹುಮತದಿಂದ ಗೆಲುವನ್ನು ಪಡೆಯಲಿದ್ದಾರೆ ಎಂದು ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ವಿ ಕಿಣಿ ಹೇಳಿದರು.
ಅವರು ಬೆಳ್ತಂಗಡಿಯಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಬೆಳ್ತಂಗಡಿಗೆ ಬಂದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಿನ ಚುನಾವಣೆಯಲ್ಲಿ ಬಂಗೇರರೇ ಅಭ್ಯರ್ಥಿ ಎಂಬುದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದರಿಂದಾಗಿ ಭಯಗೊಂಡಿರುವ ಕೆಲ ಶಕ್ತಿಗಳು ಕಳೆದ ಕೆಲ ದಿನಗಳಿಂದ ಇಂತಹ ವದಂತಿಗಳು ಹರಿಬಿಡುತ್ತಿದೆ. ಆದರೆ ಇದೆಲ್ಲವೂ ಆಧಾರ ರಹಿತವಾದುದು, ಶಾಸಕರೆ ಹಲವು ಬಾರಿ ಇದೆಲ್ಲವನ್ನೂ ನಿರಾಕರಿಸಿದ್ದಾರೆ ಆದರೆ ಮತ್ತೆ ಮತ್ತೆ ಕೆಲವರು ಉದ್ದೇಶಪೂರ್ವಕವಾಗಿ ಇಂತಹ ವದಂತಿಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಯಾರೋ ಅನಾಮಧೇಯ ವ್ಯಕ್ತಿ ಇಂತಹ ಮಾಹಿತಿ ನೀಡಿದ್ದಾರೆ ಎಂದು ಚಾನೆಲ್‌ನವರು ಹೇಳುತ್ತಿದ್ದಾರೆ. ಅವರು ಹೇಳಿದ ಮಾಹಿತಿಯನ್ನು ಯಾವುದೇ ಆಧಾರವಿಲ್ಲದೆ ಪ್ರಕಟಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ಅವರ ಬಳಿ ಬಂಗೇರರು ಬಿಜೆಪಿಯವರೊಂದಿಗೆ ಮಾತುಕತೆ ನಡೆಸಿದ ಯಾವುದಾದರೂ ದಾಖಲೆಗಳಿದ್ದರೆ ಅದನ್ನು ಬಹಿರಂಗ ಪಡಿಸಲಿ ಇಲ್ಲವಾದರೆ ಬಹಿರಂಗವಾಗಿ ಬಂಗೇರರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿ ವಸಂತ ಬಂಗೇರರು ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ನೋಡಿ ವಿರೊಧ ಪಕ್ಷಗಳಿಗೆ ಇಲ್ಲಿ ಅವಕಾಶವೇ ಇಲ್ಲವೆಂದಾಗಿದೆ ಅದರಿಂದಾಗಿ ಬಂಗೇರರು ತಮ್ಮಲ್ಲಿಗೆ ಬಂದರೆ ಒಳಿತು ಎಂದು ಅವರ ಬೆನ್ನು ಬಿದ್ದಿದ್ದಾರೆ ವಿರೋಧ ಪಕ್ಷಗಳಿಗೆ ಚುನವಣೆ ಗೆಲ್ಲುವ ಶಕ್ತಿಯೇ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದರು.
ಬಂಗೇರರು ಕಾಂಗ್ರೆಸ್ ಪಕ್ಷವನ್ನು ಒಪ್ಪಿ ಪಕ್ಷಕ್ಕೆ ಬಂದು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಅವರು ರಾಜ್ಯದ ಹಿರಿಯ ರಾಜಕಾರಣಿ ಬಿಜೆಪಿ ಯಂತಹ ಪಕ್ಷಕ್ಕೆ ಹೋಗುವ ಕಾರ್ಯವನ್ನು ಅವರು ಎಂದಿಗೂ ಮಾಡಲಾರರು ಪಕ್ಷದ ಕಾರ್ಯಕರ್ತರು ಇಂತಹ ವದಂತಿಗಳಿಗೆ ಕಿವಿಕೊಡುವ ಅಗತ್ಯವಿಲ್ಲ ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜಶೇಖರ ಅಜ್ರಿ, ಕೆಪಿಸಿಸಿ ಸದಸ್ಯರುಗಳಾದ ಪೀತಾಂಬರ ಹೆರಾಜೆ, ರಾಮಚಂದ್ರಗೌಡ, ಬೆಳ್ತಂಗಡಿ ಪಟ್ಟಣಪಂಚಾಯತು ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಇ ಸುಂದರಗೌಡ, ಜಗದೀಶ, ಪಟ್ಟಣ ಪಂಚಾಯತು ಉಪಾಧ್ಯಕ್ಷ ಸಂತೋಷ್, ಗ್ರಾಮೀಣ ಬ್ಲಾಕ್ ಕಾರ್ಯದರ್ಶಿ ಕರುಣಾಕರ ಉಪಸ್ಥಿತರಿದ್ದರು.







