ರಣಜಿ ಟ್ರೋಫಿ: ಹೈದರಾಬಾದ್ ಗೆಲುವಿಗೆ 380 ರನ್ ಗುರಿ
ಕರುಣ್ ನಾಯರ್ ಶತಕ, ಸ್ಟುವರ್ಟ್ ಬಿನ್ನಿ ಅರ್ಧಶತಕ

ಶಿವಮೊಗ್ಗ, ಅ.26: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕರುಣ್ ನಾಯರ್‌ರ 11ನೆ ಶತಕ(134) ಹಾಗೂ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ(72) ಅರ್ಧಶತಕದ ಕೊಡುಗೆಯ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಹೈದರಾಬಾದ್ ತಂಡದ ಗೆಲುವಿಗೆ 380 ರನ್‌ಗಳ ಸವಾಲು ನೀಡಿದೆ. ಮೂರನೆ ದಿನವಾದ ಗುರುವಾರ ಗೆಲುವಿಗೆ ಕಠಿಣ ಸವಾಲು ಪಡೆದ ಹೈದರಾಬಾದ್ 32 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ. ಕೊನೆಯ ದಿನವಾದ ಶುಕ್ರವಾರ ಇನ್ನೂ 288 ರನ್ ಗಳಿಸಬೇಕಾಗಿದೆ. ಆರಂಭಿಕ ಆಟಗಾರ ತನ್ಮಯ್ ಅಗರವಾಲ್(ಅಜೇಯ 43) ಹಾಗೂ ಅಂಬಟಿ ರಾಯುಡು(ಅಜೇಯ 18) ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಜೋಡಿ ಮೂರನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 42 ರನ್ ಗಳಿಸಿದೆ.
ಕರ್ನಾಟಕ 332: ಇದಕ್ಕೆ ಮೊದಲು 4 ವಿಕೆಟ್‌ಗಳ ನಷ್ಟಕ್ಕೆ 127 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ ಕರುಣ್ ನಾಯರ್(134, 229 ಎಸೆತ, 17 ಬೌಂಡರಿ) ಹಾಗೂ ಸ್ಟುವರ್ಟ್ ಬಿನ್ನಿ(72, 144 ಎಸೆತ, 8 ಬೌಂಡರಿ, 1 ಸಿಕ್ಸರ್)5ನೆ ವಿಕೆಟ್‌ಗೆ ಸೇರಿಸಿದ 160 ರನ್ ಜೊತೆಯಾಟದ ನೆರವಿನಿಂದ 332 ರನ್ ಗಳಿಸಿ ಆಲೌಟಾಯಿತು. ಒಟ್ಟು 379 ರನ್ ಮುನ್ನಡೆ ಸಾಧಿಸಿತು.
ಮೊದಲ ಇನಿಂಗ್ಸ್‌ನಲ್ಲಿ 61 ರನ್ ಗಳಿಸಿದ್ದ ಬಿನ್ನಿ ಪಂದ್ಯದಲ್ಲಿ ಸತತ 2ನೆ ಅರ್ಧಶತಕ ಬಾರಿಸಿದರು. ಬಿನ್ನಿ ಎಡಗೈ ಸ್ಪಿನ್ನರ್ ಮೆಹೆದಿ ಹಸನ್‌ಗೆ(5-88) ವಿಕೆಟ್ ಒಪ್ಪಿಸಿದರು. ಬಿನ್ನಿ ಔಟಾದ ಬಳಿಕ ಸಿಎಂ ಗೌತಮ್(21) ಅವರೊಂದಿಗೆ 41 ರನ್ ಹಾಗೂ ನಾಯಕ ವಿನಯ್‌ಕುಮಾರ್(14) ಅವರೊಂದಿಗೆ 8ನೆ ವಿಕೆಟ್‌ಗೆ 37 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ಲೆಗ್ ಸ್ಪಿನ್ನರ್ ಆಕಾಶ್ ಭಂಡಾರಿ(3-64) ಬೇರ್ಪಡಿಸಿದರು. ಮೊದಲ ಇನಿಂಗ್ಸ್‌ನಲ್ಲಿ 42 ರನ್‌ಗೆ 4 ವಿಕೆಟ್ ಕಬಳಿಸಿದ್ದ ವೇಗದ ಬೌಲರ್ ಮುಹಮ್ಮದ್ ಸಿರಾಜ್ 2ನೆ ಇನಿಂಗ್ಸ್ ನಲ್ಲಿ ಕೇವಲ 3 ಓವರ್ ಬೌಲಿಂಗ್ ಮಾಡಿದರು.







