ಇಬ್ಬರಿಗೆ ಜೀವಾವಧಿ ಶಿಕ್ಷೆ ಖಾಯಂ: ಹೈಕೋರ್ಟ್
ಜೆಡಿಎಸ್ ಮುಖಂಡ ಬೋರೆಗೌಡ ಕೊಲೆ ಪ್ರಕರಣ
ಬೆಂಗಳೂರು, ಅ.27: ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ ಕೆ.ಜೆ.ಬೋರೆಗೌಡ(35) ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ಖಾಯಂಗೊಳಿಸಿ, ಮತ್ತಿಬ್ಬರನ್ನು ಹೈಕೋರ್ಟ್ ಬಿಡುಗಡೆಗೊಳಿಸಿ ಆದೇಶಿಸಿದೆ.
ಮಂಡ್ಯದ ಎಡಿಜೆ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆ ಖಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸಬೇಕು ಎಂದು ಕೋರಿ ನಾಲ್ವರು ಅಪರಾಧಿಗಳು ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ನ್ಯಾಯಪೀಠವು ಗೋಪಾಲಕೃಷ್ಣ, ವೆಂಕಟೇಶ್‌ಗೆ ಜೀವಾವಧಿ ಶಿಕ್ಷೆ ಖಾಯಂಗೊಳಿಸಿ, ರಘು ಮತ್ತು ಚೆನ್ನೆಗೌಡರನ್ನು ಬಿಡುಗಡೆಗೊಳಿಸಿ ಆದೇಶಿಸಿತು.
2009ರ ಎ.6ರಂದು ಅಪರಾಧಿಗಳಾದ ಕೆ.ಎನ್.ಗೋಪಾಲಕೃಷ್ಣ, ವೆಂಕಟೇಶ್, ರಘು ಮತ್ತು ಚೆನ್ನೆಗೌಡ ಅವರು ಜೆಡಿಎಸ್ ಮುಖಂಡ ಕೆ.ಜೆ.ಬೋರೆಗೌಡ ಅವರನ್ನು ಮಂಡ್ಯ ಜಿಲ್ಲೆಯ ಕೊಣನಹಳ್ಳಿತಿಟ್ಟು ಗ್ರಾಮದ ಮಹಾತ್ಮಗಾಂಧಿ ಬಡಾವಣೆಯಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಈ ಮೊಕದ್ದಮೆಯನ್ನು ದಾಖಲಿಸಿಕೊಂಡಿದ್ದ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸಿ ಎಡಿಜೆ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
2011ರ ನ.18ರಂದು ಮಂಡ್ಯ ಎಡಿಜೆ ಕೋರ್ಟ್ ನಾಲ್ವರು ಆರೋಪಿಗಳೂ ಸೇರಿಕೊಂಡು ಕೆ.ಜೆ.ಬೋರೆಗೌಡರನ್ನು ಕೊಚ್ಚಿ ಕೊಲೆ ಮಾಡಿರುವ ಬಗ್ಗೆ ಬಲವಾದ ಸಾಕ್ಷಿಗಳಿವೆ. ಹೀಗಾಗಿ, ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ನಾಲ್ವರು ಅಪರಾಧಿಗಳ ಪೈಕಿ ಗೋಪಾಲಕೃಷ್ಣ, ವೆಂಕೆಟೇಶ್‌ಗೆ ಜೀವಾವಧಿ ಶಿಕ್ಷೆ ಖಾಯಂಗೊಳಿಸಿ, ಮತ್ತಿಬ್ಬರಿಗೆ ತಲಾ 25 ಸಾವಿರ ರೂ.ದಂಡ ವಿಧಿಸಿ ಹೈಕೋರ್ಟ್ ಬಿಡುಗಡೆಗೊಳಿಸಿ ಆದೇಶಿಸಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಿ.ಎಚ್.ಜಾದವ್ ವಾದಿಸಿದರು. ಸರಕಾರದ ಪರವಾಗಿ ರೇಣುಕಾ ವಾದಿಸಿದರು.







