ಸಿಬಿಐ ಮನವಿ: ಆದೇಶ ಕಾಯ್ದಿರಿಸಿದ ನ್ಯಾಯಾಲಯ
ನಜೀಬ್ ಅಹ್ಮದ್ ನಾಪತ್ತೆ ಪ್ರಕರಣ

ಹೊಸದಿಲ್ಲಿ, ಅ. 27: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ 9 ವಿದ್ಯಾರ್ಥಿಗಳ ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ಕೋರಿದ ಅರ್ಜಿ ವಿಚಾರಣೆಯನ್ನು ಶೀಘ್ರ ನಡೆಸುವಂತೆ ಆಗ್ರಹಿಸಿ ಸಿಬಿಐ ಸಲ್ಲಿಸಿದ ಅರ್ಜಿಯ ಆದೇಶವನ್ನು ಇಲ್ಲಿನ ನ್ಯಾಯಾಲಯ ಶುಕ್ರವಾರ ಕಾದಿರಿಸಿದೆ. ಸಿಬಿಐಯ ಅರ್ಜಿ ಕುರಿತ ಆದೇಶವನ್ನು ಅಕ್ಟೋಬರ್ 30ರಂದು ನೀಡಲಾಗುವುದು ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ದಂಡಾಧಿಕಾರಿ ಸಮರ್ ವಿಶಾಲ್ ಹೇಳಿದ್ದಾರೆ.
ಈ ಹಿಂದೆ ವಿಚಾರಣಾ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆಗೆ ಕೋರುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ ಸಿಬಿಐ ಮನವಿ ಮಾಡಿಕೊಂಡಿತ್ತು. ವಿಚಾರಣಾ ನ್ಯಾಯಾಲಯವು ಈ ಹಿಂದೆ ಪ್ರಕರಣದ ವಿಚಾರಣೆಯನ್ನು 2018 ಜನವರಿಗೆ ಮುಂದೂಡಿತ್ತು.
ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ವಿದ್ಯಾರ್ಥಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಓರ್ವ ವಿದ್ಯಾರ್ಥಿ ವಿನಾಯಿತಿ ಕೋರಿದ್ದರು ಹಾಗೂ ಅವರ ಪರ ವಕೀಲರು ಹಾಜರಾಗಿದ್ದರು.





