ಕಡಬ ತಾಲೂಕಿಗೆ 43 ಗ್ರಾಮಗಳು
ಮಂಗಳೂರು, ಅ. 27: ಹೊಸದಾಗಿ ರಚನೆಯಾಗಿರುವ ಕಡಬ ತಾಲೂಕು ವ್ಯಾಪ್ತಿಗೆ 43 ಗ್ರಾಮಗಳು ಸೇರ್ಪಡೆಯಾಗಲಿವೆ. ಕಡಬ ಹೋಬಳಿಯಲ್ಲಿರುವ 23 ಗ್ರಾಮಗಳ ಜೊತೆಗೆ ಪುತ್ತೂರು ತಾಲೂಕು ಉಪ್ಪಿನಂಗಡಿ ಹೋಬಳಿಯ ಒಂಬತ್ತು ಮತ್ತು ಸುಳ್ಯ ತಾಲೂಕಿನ ಪಂಜ ಹೋಬಳಿಯ ಎಂಟು ಗ್ರಾಮಗಳು ಹೊಸ ತಾಲೂಕಿಗೆ ಸೇರಲಿವೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಉಪ ವಿಭಾಗಾಧಿಕಾರಿ ಡಾ.ರಘುನಂದನ್ ಸಭೆಯಲ್ಲಿ ಉಪಸ್ಥಿತರಿದ್ದರು.
ಉಪ್ಪಿನಂಗಡಿ ಹೋಬಳಿಯಲ್ಲಿರುವ ಕೊಣಾಜೆ, ಶಿರಿಬಾಗಿಲು, ಗೋಳಿತಟ್ಟು, ಕೊಣಾಲು, ಅಳಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚಲಂಪಾಡಿ ಮತ್ತು ಶಿರಾಡಿ ಗ್ರಾಮಗಳನ್ನು ಹಾಗೂ ಪಂಜ ಹೋಬಳಿಯ ಏನೇಕಲ್ಲು, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೆನ್ಯಾ, ಕುತ್ಕುಂಜ, ಎಣ್ಮೂರು ಮತುತಿ ಎಡಮಂಗಲ ಗ್ರಾಮಗಳನ್ನು ಹೊಸ ತಾಲೂಕಿಗೆ ಸೇರಿಸಲು ನಿರ್ಣಯ ಕೈಗೊಳ್ಳಲಾಯಿತು. ಒಟ್ಟು 45 ಗ್ರಾಮಗಳನ್ನು ಕಡಬ ತಾಲ್ಲೂಕಿಗೆ ಸೇರಿಸುವ ಪ್ರಸ್ತಾವವಿತ್ತು. ಆದರೆ, ಎರಡು ಗ್ರಾಮಗಳನ್ನು ಪಟ್ಟಿಯಿಂದ ಕೈಬಿಡಲಾಯಿತು.
ಜನಸಂಖ್ಯೆಯ ವಿವರವನ್ನು ಪಡೆದು ಪರಿಶೀಲಿಸಿದ ಬಳಿಕ ಹೊಸ ಹೋಬಳಿ ಕೇಂದ್ರಗಳನ್ನು ಗುರುತಿಸುವ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.







