ಬಾಹ್ಯಾಕಾಶ ಸಂಶೋಧನೆಯಲ್ಲಿ ಜೀವವಿಜ್ಞಾನದ ಪಾತ್ರ ಮಹತ್ತರ: ಪ್ರೊ.ಎಸ್.ಕೆ.ಶಿವಕುಮಾರ್

ತುಮಕೂರು, ಅ.27: ಜೀವವಿಜ್ಞಾನದ ಸಂಶೋಧನೆಯಲ್ಲೂ ಬಾಹ್ಯಾಕಾಶ ತಂತ್ರಜ್ಞಾನದ ಪಾತ್ರ ಮಹತ್ತರವಾದದ್ದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಸ್.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ತುಮಕೂರು ವಿವಿ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗ ಏರ್ಪಡಿಸಿದ್ದ ‘ಜೀವವಿಜ್ಞಾನದಲ್ಲಿನ ಬೆಳವಣಿಗೆಗಳು’ ಕುರಿತ ಎರಡು ದಿನದ ಉಪನ್ಯಾಸ ಸರಣಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವವಿಜ್ಞಾನದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಹಾಗೂ ಅಧ್ಯಯನಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕೇಂದ್ರೀಯ ವಿಶ್ವವಿದ್ಯಾನಿಲಯ ಕಲಬುರ್ಗಿ ಇದರ ಸಮಕುಲಾಧಿಪತಿ ಪ್ರೊ.ಜಿ.ಆರ್.ನಾಯ್ಕ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಕುರಿತ ತಿಳುವಳಿಕೆ, ವೈಜ್ಞಾನಿಕ ಚಿಂತನೆ ಹಾಗೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಕೆ.ಸೈದಾಪುರ ಮಾತನಾಡಿ, ಉಪನ್ಯಾಸ ಸರಣಿಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಅಭಿವೃದ್ಧಿ ಚಿಂತನೆಗಳನ್ನು ಮೂಡಿಸಲು ಸಹಕಾರಿ ಎಂದರು.
ತುಮಕೂರು ವಿ.ವಿ.ಕುಲಸಚಿವ ಪ್ರೊ.ಎಂ.ವೆಂಕಟೇಶ್ವರಲು, ವಿದ್ಯಾರ್ಥಿಗಳು ಇತೀಚಿನ ದಿನಗಳಲ್ಲಿ ಮೂಲವಿಜ್ಞಾನ ಮತ್ತು ಜೀವ ವಿಜ್ಞಾನದತ್ತ ಒಲವು ತೋರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಕೆಎಸ್‍ಟಿಎ ಆಯೋಜಿಸಿದ್ದ ಪರೀಕ್ಷೆಯಲ್ಲಿ ವಿಜೇತರಾದ ಮೌನ ಎಸ್, ಸಿಂಧು ಹಾಗೂ ಮಹಾಲಕ್ಷ್ಮಿ ಅವರಿಗೆ ಈ ವೇಳೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕುಲಪತಿ ಪ್ರೊ ಜಯಶೀಲ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಐಐಎಸ್‍ಸಿಯ ಪ್ರಾಧ್ಯಾಪಕ ಪ್ರೊ.ಟಿ.ಎನ್.ಗುರುರಾವ್, ವಿಭಾಗದ ಸಂಯೋಜಕ ಡಾ.ವೈ.ಎನ್.ಸೀತಾರಾಮ್, ಹಣಕಾಸು ಅಧಿಕಾರಿ ಪ್ರೊ.ಪಿ.ಪರಮಶಿವಯ್ಯ, ರಸಾಯನಶಾಸ್ತ್ರ ವಿಭಾಗದ ಡಾ. ಶ್ರೀನಿವಾಸ, ಡಾ. ಡಿ. ಸುರೇಶ್, ಸಸ್ಯಶಾಸ್ತ್ರ ವಿಭಾಗದ ಸಂಯೋಜಕ ಡಾ. ವೈ. ಎನ್. ಸೀತಾರಾಮ್ ಉಪಸ್ಥಿತರಿದ್ದರು.







