ರವಿಶಂಕರ್ ಗುರೂಜಿಗೆ ಸೇರಿದ ಕಟ್ಟಡ ಕೆಡವಲು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆದೇಶ
ಕೋಲ್ಕತ್ತಾ, ಅ. 27: ಕೋಲ್ಕತ್ತಾದ ಪಾರಿಸರಿಕ ಪ್ರಾಮುಖ್ಯತೆ ಹೊಂದಿದ ಪೂರ್ವ ಕೋಲ್ಕತ್ತಾದ ಆರ್ದಭೂಮಿ (ಇಕೆಡಬ್ಲ್ಯು) ಯಲ್ಲಿರುವ ರವಿಶಂಕರ್ ಗುರೂಜಿಗೆ ಸಂಸ್ಥೆಗೆ ಸೇರಿದ ಮೂರು ಮಹಡಿಯ ಕಟ್ಟಡವನ್ನು ಕೆಡವುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆದೇಶಿಸಿದೆ.
ಮಂಡಳಿಯ ಪೂರ್ವ ವಲಯ ಪೀಠ ತನ್ನ ಅಕ್ಟೋಬರ್ 25ರಂದು ನೀಡಿದ ಆದೇಶದಲ್ಲಿ ವೈದಿಕ ಧರ್ಮ ಸಂಸ್ಥಾನ (ವಿಡಿಎಸ್)ಕ್ಕೆ ಸೇರಿದ ಮೂರು ಮಹಡಿಯ ಕಟ್ಟಡವನ್ನು ಮೂರು ತಿಂಗಳಲ್ಲಿ ನೆಲಸಮಗೊಳಿಸುವಂತೆ ಇಕೆಡಬ್ಲ್ಯು ನಿರ್ವಹಣಾ ಪ್ರಾಧಿಕಾರ (ಇಕೆಡಬ್ಲ್ಯುಎಂಎ)ಕ್ಕೆ ನಿರ್ದೇಶಿಸಿದೆ ಹಾಗೂ ದಂಡ ವಿಧಿಸಲು ಪರಿಗಣಿಸಿದೆ. ಪಶ್ಚಿಮಬಂಗಾಳ ಸರಕಾರದ ಪರಿಸರ ಇಲಾಖೆ ಅಡಿಯಲ್ಲಿ ಬರುವ ಇಕೆಡಬ್ಲುಎಂಎ ಕಳುಹಿಸಿದ ನೋಟಿಸ್‌ಗಳನ್ನು ವಿಡಿಎಸ್ ನಿರ್ಲಕ್ಷಿಸಿತ್ತು ಹಾಗೂ 2015 ಜುಲೈ-ಆಗಸ್ಟ್‌ನಿಂದ ಕಟ್ಟಡ ನಿರ್ಮಿಸಲಾಗಿತ್ತು.
ಅಧಿಕಾರ ಹೊಂದಿರುವ ಹೊರತಾಗಿಯೂ ಇಕೆಡಬ್ಲುಎಂಎ ಈ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಿರಲಿಲ್ಲ. ಇದರಿಂದಾಗಿ ಸರಕಾರೇತರ ಸಂಸ್ಥೆ ಪಿಪಲ್ ಯೂನೈಟೆಡ್ ಫಾರ್ ಬೆಟರ್ ಲಿವಿಂಗ್ ಇನ್ ಕಲ್ಕತ್ತಾ (ಪಿಯುಬಿಎಲ್‌ಐಸಿ-ಪಬ್ಲಿಕ್) 2016ರಲ್ಲಿ ಹಸಿರು ನ್ಯಾಯ ಮಂಡಳಿಯಲ್ಲಿ ದೂರು ದಾಖಲಿಸಿತ್ತು.
ಈ ಬಗ್ಗೆ ವಿಡಿಎಸ್ ಪರ ವಕೀಲ ಸಕಾಬ್ದ ರಾಯ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದೇಶ ಅನುಷ್ಠಾನಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಪಬ್ಲಿಕ್‌ನ ಪ್ರದೀಪ್ ಕಕ್ಕಾರ್ ಹೇಳಿದ್ದಾರೆ.









