ಎನ್ನೆಸ್ಸೆಸ್ ತತ್ವಾದರ್ಶ ನಿತ್ಯ ಜೀವನಕ್ಕೆ ಮಾದರಿ: ಸಂಪತ್ ಬೆಟ್ಟಗೆರೆ

ಮೂಡಿಗೆರೆ, ಅ.27: ಎನ್ನೆಸ್ಸೆಸ್ ಅಥವಾ ರಾಷ್ಟ್ರೀಯ ಸೇವಾ ಯೋಜನೆಯು ನಾನು ಸದಾ ಸಿದ್ಧ, ನಾನು ಶಿಸ್ತಿನ ಸಿಪಾಯಿ ಎಂಬ ತತ್ವವನ್ನು ಅಳವಡಿಸಿಕೊಂಡಿದೆ. ಇದು ವಿದ್ಯಾರ್ಥಿಗಳ ದೇಶ ಕಟ್ಟುವ ಕನಸಿಗೆ ಸ್ಫೂರ್ತಿ ತುಂಬುತ್ತಿರುವ ವಿಶಿಷ್ಟ ಕಾರ್ಯಕ್ರಮವಾಗಿದೆ. ಈ ಯೋಜನೆಯ ತತ್ವಾದರ್ಶಗಳು ನಿತ್ಯ ಜೀವನಕ್ಕೆ ಮಾದರಿಯಾಗಿವೆ ಎಂದು ಕನ್ನಡ ಉಪನ್ಯಾಸಕ ಸಂಪತ್ ಬೆಟ್ಟಗೆರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಮೂಡಿಗೆರೆ ತಾಲೂಕಿನ ಭಾರತಿಬೈಲು ಗ್ರಾಮದಲ್ಲಿ ಮೂಡಿಗೆರೆಯ ತೋಟಗಾರಿಕೆ ಕಾಲೇಜು ಆಯೋಜಿಸಿರುವ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ‘ರಾಷ್ಟ್ರೀಯ ಸೇವಾಯೋಜನೆಯಲ್ಲಿ ವಿಶೇಷ ಶಿಬಿರದ ಪಾತ್ರ’ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.
ಶಿಸ್ತು, ಸಮಯ ಪ್ರಜ್ಞೆ, ಸಹಬಾಳ್ವೆ, ಸಹಭೋಜನ, ಹೊಂದಾಣಿಕೆ, ಶ್ರಮದ ಮಹತ್ವ, ಪರಿಣಾಮಕಾರಿ ಭಾಷಣ ಕಲೆ, ಸಭಾಕಂಪನ ನಿವಾರಣೆ, ಪ್ರತಿಭಾ ಪ್ರದರ್ಶನ, ವ್ಯಕ್ತಿತ್ವ ವಿಕಾಸನ, ಆತ್ಮ ವಿಶ್ವಾಸ, ಮಾನಸಿಕ ಸ್ಥೈರ್ಯ, ರಾಷ್ಟ್ರೀಯ ಭಾವೈಕ್ಯತೆ, ಜೀವನಪ್ರೀತಿಯ ಮೂಲಕ ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿದೆ. 1952ರಲ್ಲಿ ರಚನೆಯಾದ ಎನ್ನೆಸ್ಸೆಸ್ 1969ರಲ್ಲಿ ಗಾಂಧೀಜಿಯವರ ಶತವರ್ಷದ ಸಂದಭರ್ದಲ್ಲಿ ಚಾಲನೆ ಪಡೆದುಕೊಂಡಿತು ಎಂದು ತಿಳಿಸಿದರು.
ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಸ್.ಕೆ.ನಟರಾಜ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ರೈತರು ಖಾಯಿಲೆ ರಹಿತ ತಳಿಗಳನ್ನು ಆಯ್ಕೆಮಾಡಿಕೊಂಡು ನಾಟಿಮಾಡಬೇಕು. ಜೊತೆಗೆ ಕಾಲಕಾಲಕ್ಕೆ ಸೂಕ್ತ ಜೌಷಧಿ ಹಾಗೂ ಗೊಬ್ಬರ ಉಪಚಾರ ನೀಡಿದರೆ, ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ಇದೇ ವೇಳೆ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ತೋಟಗಾರಿಕೆ ಪ್ರಾಧ್ಯಾಪಕರಾದ ರವಿರಾಜ ಶೆಟ್ಟಿ ರೈತರ ಪ್ರಶ್ನೆಗಳಿಗೆ ಪ್ರತಿಸ್ಪಂದನ ಉತ್ತರ ನೀಡಿದರು.
ತೋಟಗಾರಿಕೆ ಬೆಳೆಗಳಾದ ವಿವಿಧ ಬಗೆಯ ತರಕಾರಿಗಳು, ಹಣ್ಣಿನಗಿಡಗಳು, ಕಾಳುಮೆಣಸನ್ನು ಪಾಲಿಹೌಸ್‌ನಲ್ಲಿ ಬೆಳೆಯುವ ಕ್ರಮ ಕುರಿತುಮಾಹಿತಿ ನೀಡಲಾಯಿತು.
ಕಾರ್ಯಕ್ರಮಕ್ಕೆ ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಕುಲಸಚಿವ ಮಣಿಕಂಠ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮುಖಂಡರಾದ ಮಂಜುನಾಥ್ ವಹಿಸಿದ್ದರು. ಬಕ್ಕಿ ಮಂಜು, ಜಯಪಾಲ್, ನಾಜೀವ್ ಜನಪದ ಗೀತಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದ ಸಂಯೋಜನಾಧಿಕಾರಿ ಪ್ರೊ.ಯಲ್ಲೇಶ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಸರ್ದಾರ್ ವಲ್ಲಬಾಯಿ ಪಟೇಲ್ ತಂಡ ಕಾರ್ಯಕ್ರಮವನ್ನು ನಿರ್ವಹಿಸಿದರು. ತಮನ್ನಾ ನಿರೂಪಿಸಿ, ಸಾವಿತ್ರಿ ಸ್ವಾಗತಿಸಿ, ಅಪೂರ್ವ ವಂದಿಸಿದರು.







