ದಯಾನಂದ-ಚಿತ್ರನಟಿ ರಾಸಲೀಲೆ ಪ್ರಕರಣ: ಮಠದಿಂದ ಹೊರ ಹಾಕುವಂತೆ ಭಕ್ತರ ಪಟ್ಟು
ಬೆಂಗಳೂರು, ಅ.27: ದಯಾನಂದ ಯಾನೆ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿಯ ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಅವರ ಕುಟುಂಬಸ್ಥರನ್ನು ಮಠದಿಂದ ಹೊರಹಾಕುವಂತೆ ಆಗ್ರಹಿಸಿ ಮಠದ ಭಕ್ತರು, ಸ್ಥಳೀಯರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ದೇವನಹಳ್ಳಿ ಮಾರ್ಗದ ಹುಣಸಮಾರನಹಳ್ಳಿಯ ಜಂಗಮ ಮಠದ ಆವರಣದಲ್ಲಿ ಬೆಳಗ್ಗೆಯಿಂದಲೇ ನೂರಾರು ಭಕ್ತರು ಸೇರಿ ಪ್ರತಿಭಟನೆ ನಡೆಸಿ, ಪೀಠಾಧ್ಯಕ್ಷ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯನ್ನು ಹೊರಹಾಕಿ ಬೇರೆ ಸ್ವಾಮೀಜಿಯೊಬ್ಬರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಶ್ರೀಶೈಲ ಮಠದ ಶಾಖಾ ಮಠವಾಗಿರುವ ಹುಣಸಮಾರನಹಳ್ಳಿಯ ಜಂಗಮ ಮಠದಲ್ಲಿ ಹಲವು ದಿನಗಳಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಅದನ್ನು ನೋಡಿಕೊಂಡು ಸುಮ್ಮನಿರುವುದು ಸಾಧ್ಯವಿಲ್ಲ. ಹೀಗಾಗಿ, ರಂಭಾಪುರಿ ಶ್ರೀಗಳು ಹಾಗೂ ಶ್ರೀಶೈಲ ಮಠದ ಶ್ರೀಗಳು ಧಾವಿಸಿ ಭಕ್ತರ ಮನವಿಗೆ ಸ್ಪಂದಿಸಿ ಮಠದ ಗೌರವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ಪೀಠಾಧ್ಯಕ್ಷರಾದ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ಹಾಗೂ ಕುಟುಂಬಸ್ಥರು ಹೊರ ಹಾಕುವಂತೆ ಒಂದು ಬಣ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದು, ಪ್ರತಿಭಟನಾ ನಿರತ ಭಕ್ತರು ಮತ್ತು ಟ್ರಸ್ಟ್ ಸದಸ್ಯರು ಸ್ವಾಮೀಜಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೀಗಿ ಬಂದೋಬಸ್ತ್: ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಒದಗಿಸಲಾಗಿದೆ. ಅಲ್ಲದೇ ಅವರ ವಿರುದ್ಧ ಯಾರೊಬ್ಬರೂ ದೂರು ನೀಡಿಲ್ಲ ಹಾಗಾಗಿ ಅವರ ಪತ್ತೆಕಾರ್ಯಕ್ಕೆ ಪೊಲೀಸರು ಮುಂದಾಗಿಲ್ಲ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಹಣ ಸುಲಿಗೆ-ಆರೋಪ: ದಯಾನಂದ ಯಾನೆ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿಯು ನಟಿಯೊಬ್ಬರ ಜೊತೆ ರಾಸಲೀಲೆ ನಡೆಸಿದ ಸಿಡಿ ಮಾಡಿರುವುದು ಗಮನಕ್ಕೆ ಬಂದ ಕೂಡಲೇ ಅಂದಿನ ನಗರ ಪೊಲೀಸ್ ಆಯುಕ್ತರಾಗಿದ್ದ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಸಿಡಿ ಬಯಲಾಗದಂತೆ ತಡೆಹಿಡಿದು ಸಂಧಾನ ನಡೆಸಿರುವ ಸಂಗತಿ ನಡೆಸಿದರು ಎನ್ನುವ ಆರೋಪ ಕೇಳಿ ಬಂದಿದೆ. ಜ್ಯೋತಿಪ್ರಕಾಶ್ ಮಿರ್ಜಿ ಅವರು ತಮ್ಮ ಕಚೇರಿಗೆ ಕರೆಸಿಕೊಂಡು ಸಂಧಾನ ನಡೆಸಿ ಸಿಡಿ ಬಯಲಾಗುವುದನ್ನು ತಡೆದಿದ್ದರು ಎಂದು ಮಠದ ಭಕ್ತರೊಬ್ಬರು ತಿಳಿಸಿದ್ದಾರೆ. ಪ್ರಕರಣದ ಹಿಂದೆ ಸಂಬಂಧಿಕರ ಕೈವಾಡ ಇದೆ ಎನ್ನಲಾಗುತ್ತಿದ್ದು, ಮಠದ ಆಸ್ತಿ ಹೊಡೆಯಲು ಸಂಬಂಧಿಕರಾದ ಮಲ್ಲಿಕಾರ್ಜುನ, ಹಿಮಾಚಲ, ಚಂದ್ರು ಹನಿಟ್ರ್ಯಾಪ್ ಮಾಡಿದ್ದರೆಂದು ಹೇಳಲಾಗುತ್ತಿದೆ. ಇವರೆಲ್ಲಾ ಮಠದಲ್ಲೇ ಕೆಲಸ ಮಾಡುತ್ತಿದ್ದರು ಅವರೇ ಕೃತ್ಯ ನಡೆಸಿದ್ದಾರೆ ಎಂದು ಹುಣಸಮಾರನಹಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಮಣ್ಣ ಆರೋಪ ಮಾಡಿದ್ದಾರೆ.
ಕೋಟಿಗಟ್ಟಲೆ ಹಣ ಲೂಟಿ ಹೊಡೆದಿದ್ದಾರೆ, ಈಗ ಪ್ರತಿಭಟನೆ ಮಾಡುತ್ತಿರುವವರೇ ಹೀಗೆಲ್ಲಾ ಮಾಡಿದ್ದು ಎಂದು ರಾಮಣ್ಣ ದೂರಿದ್ದಾರೆ.
ಮಿರ್ಜಿ ಸ್ಪಷ್ಟನೆ: ವೀರಶೈವ ಲಿಂಗಾಯತ ಸಮುದಾಯವಾದ್ದರಿಂದ ನಾನು ಮಾತುಕತೆಗೆ ಹೋಗಿದ್ದೆ. ಮಠದ ಆಸ್ತಿ ಸಂಬಂಧ ಜಗಳ ತೆಗೆದುಕೊಂಡು ಕೆಲವರು ನನ್ನ ಬಳಿ ಬಂದಿದ್ದರು. ಎರಡು ಕಡೆಯವರು ಬಂದು ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು ಅಷ್ಟೇ ಎಂದು ಜ್ಯೋತಿ ಪ್ರಕಾಶ್ ಮಿರ್ಜಿ ಸ್ಪಷ್ಟನೆ ನೀಡಿದ್ದಾರೆ.
'ಶೀಘ್ರದಲ್ಲಿಯೇ ನಿರ್ಧಾರ'
ಹುಣಸಮಾರನಹಳ್ಳಿಯ ಜಂಗಮ ಮಠಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಸಚ್ಚಿದಾನಂದ ಮೂರ್ತಿ ಸೇರಿ ಪ್ರಮುಖರು ಸದಸ್ಯರು ಭೇಟಿ ನೀಡಿ ಪೀಠಾಧ್ಯಕ್ಷ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿದರು. ಈ ಬಗ್ಗೆ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಸಮುದಾಯದ ಸ್ವಾಮೀಜಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ನಿರ್ಧಾರ ಪ್ರಕಟಿಸಲಾಗುವುದೆಂದು ಮಾಹಿತಿ ನೀಡಿದರು.







