ಬಣಕಲ್: ಐತಿಹಾಸಿಕ ಕಾಲಬೈರವ ದೇವಸ್ಥಾನದಲ್ಲಿ ಕಳವು
ಬಣಕಲ್, ಅ.27: ಸುಂಕಸಾಲೆ ಸಮೀಪದ ಐತಿಹಾಸಿಕ ತಾಣ ಬಲ್ಲಾಳರಾಯನ ದುರ್ಗದ ಕೋಟೆಯ ಸಮೀಪದ ದೇವಸ್ಥಾನದಲ್ಲಿ ಕೋಟ್ಯಂತರ ರೂ. ಮೌಲ್ಯದ ವಿಗ್ರಹಗಳನ್ನು ಕಳವುಗೈದಿರುವ ಘಟನೆ ಬೆಳಕಿಗೆ ಬಂದಿದೆ.
ಅ.26ರ ತಡರಾತ್ರಿ ಅಥವಾ ಅ.27ರ ಬೆಳಗ್ಗಿನ ಜಾವದ ವೇಳೆ ದೇವಸ್ಥಾನದ ಬೀಗ ಮುರಿದ ಕಳ್ಳರು ಪಂಜುರ್ಲಿಯ ವಿಗ್ರಹ, ಚಾಮುಂಡೇಶ್ವರಿಯ ವಿಗ್ರಹ ಹಾಗೂ ಕತ್ತಿ ಗುರಾಣಿ ಪಂಚಲೋಹದ ವಿಗ್ರಹ ಕಳವು ಗೈದಿದ್ದಾರೆ. ಕಳವಾಗಿರುವ ವಿಗ್ರಹಗಳ ಮೌಲ್ಯ ಕೋಟಿ ರೂ.ಗೂ ಮೀರಿದ್ದು ಎಂದು ತಿಳಿದು ಬಂದಿದೆ. ಬಲ್ಲಾಳರಾಯನ ದುರ್ಗದ ಶ್ರೀ ಕಾಲಬೈರವ ದೇವಸ್ಥಾನದಲ್ಲಿ ಪ್ರತಿನಿತ್ಯವು ಪೂಜೆ ಸಲ್ಲಿಸಲಾಗುತ್ತದೆ.
ದೇವಸ್ಥಾನದ ಅರ್ಚಕ ಜನಾರ್ಧನ ಭಟ್ ಶುಕ್ರವಾರ ಬೆಳಗ್ಗೆ ಎಂದಿನಂತೆ ಪೂಜೆ ಸಲ್ಲಿಸಲು ಬಂದಾಗ ಬೀಗ ಮುರಿದು ವಿಗ್ರಹ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಅರ್ಚಕರು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಿಗೆ ಮಾಹಿತಿ ನೀಡಿ ನಂತರ ಬಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅರ್ಚಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬಾಳೂರು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.





