ಉಡುಪಿ: ವಿಜಯ ಬ್ಯಾಂಕ್ ಸ್ಥಾಪಕರ ದಿನಾಚರಣೆ

ಉಡುಪಿ, ಅ.27: ವಿಜಯ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ ವತಿಯಿಂದ ಸ್ಥಾಪಕರ ದಿನಾಚರಣೆಯನ್ನು ಶುಕ್ರವಾರ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದ ಮಿನಿ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಸಂಸ್ಥೆಯನ್ನು ಮೊದಲು ಅದರ ಸಿಬ್ಬಂದಿಗಳು ಪ್ರೀತಿಸಬೇಕು. ಆಗ ಗ್ರಾಹಕರು ಕೂಡ ಪ್ರೀತಿಸುತ್ತಾರೆ. ಅವಿಭಜಿತ ದ.ಕ. ಜಿಲ್ಲೆಗಳು ಶಿಕ್ಷಣ, ಆರೋಗ್ಯ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಮುಂಚೂಣಿಯಲ್ಲಿವೆ. ಇದರಲ್ಲಿ ವಿಜಯ ಬ್ಯಾಂಕಿನ ಕೊಡುಗೆಯೂ ಅಪಾರ. ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಬ್ಯಾಂಕ್, ಗುಣಮಟ್ಟದ ಸೇವೆಗೆ ಹೆಸರು ಪಡೆದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಮನೋಹರ್ ಶೆಟ್ಟಿ, ಗಣಿತನಗರ ಜ್ಞಾನ ಸುಧಾ ಸಂಸ್ಥೆಯ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರು, ನಿವೃತ್ತ ಮಹಾಪ್ರಬಂಧಕರು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕ ಎಂ.ಜೆ.ನಾಗರಾಜ್ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮುಖ್ಯ ಪ್ರಬಂಧಕ ಚಿದಾನಂದ ಹೆಗ್ಡೆ ವಂದಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.







