ನಾಳೆ ವಿಶ್ವಕಪ್ ಫೈನಲ್: ಇಂಗ್ಲೆಂಡ್-ಸ್ಪೇನ್ ಹಣಾಹಣಿ

ಕೋಲ್ಕತಾ, ಅ.27: ಯುರೋಪ್‌ನ ಎರಡು ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಹಾಗೂ ಸ್ಪೇನ್ ಶನಿವಾರ ನಡೆಯಲಿರುವ ಹದಿನೇಳು ವರ್ಷದೊಳಗಿನವರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.
ಮೂರು ವಾರಗಳ ಕಾಲ ಭಾರತದ ವಿವಿಧ 6 ಸ್ಟೇಡಿಯಂಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆದಿದ್ದು, ಇಂಗ್ಲೆಂಡ್ ಹಾಗೂ ಸ್ಪೇನ್ ತಂಡಗಳು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿವೆ. 66,000 ಪ್ರೇಕ್ಷಕರ ಸಾಮರ್ಥ್ಯದ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ಉಭಯ ತಂಡಗಳು ಚೊಚ್ಚಲ ವಿಶ್ವಕಪ್ ಟ್ರೋಫಿ ಜಯಿಸುವ ಯೋಜನೆಯೊಂದಿಗೆ ಕಣಕ್ಕಿಳಿಯಲಿವೆ.
ಟೂರ್ನಮೆಂಟ್‌ನ ಎರಡು ಆಕ್ರಮಣಕಾರಿ ತಂಡಗಳಿಂದ ಗೋಲುಗಳ ಸುರಿಮಳೆ ನಿರೀಕ್ಷಿಸಲಾಗುತ್ತಿದೆ. ಇಂಗ್ಲೆಂಡ್ ಈತನಕ 18 ಗೋಲುಗಳನ್ನು ಬಾರಿಸಿದರೆ, ಸ್ಪೇನ್ 15 ಗೋಲುಗಳನ್ನು ದಾಖಲಿಸಿದೆ.
ನಾಲ್ಕನೆ ಬಾರಿ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿರುವ ಇಂಗ್ಲೆಂಡ್ ಮೊದಲ ಬಾರಿ ಫೈನಲ್‌ಗೆ ತಲುಪಿದೆ. ಸ್ಪೇನ್ 1991, 2003 ಹಾಗೂ 2007ರಲ್ಲಿ ಫೈನಲ್‌ನಲ್ಲಿ ಎಡವಿತ್ತು.
ಮೇನಲ್ಲಿ ಕ್ರೊಯೇಷಿಯದಲ್ಲಿ ನಡೆದ ಯುರೋಪಿಯನ್ ಅಂಡರ್-17 ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯ ನಿಗದಿತ ಸಮಯದಲ್ಲಿ 2-2 ರಿಂದ ಡ್ರಾಗೊಂಡಾಗ ಪೆನಾಲ್ಟಿ ಶೂಟೌಟ್‌ನಲ್ಲಿ ಫಲಿತಾಂಶ ನಿರ್ಧರಿಸಲಾಗಿತ್ತು. ಆ ಪಂದ್ಯವನ್ನು ಸ್ಪೇನ್ 4-1 ಗೋಲುಗಳಿಂದ ಗೆದ್ದುಕೊಂಡಿತ್ತು. ಇದೀಗ ಇಂಗ್ಲೆಂಡ್ ತಂಡ ಯುರೋ ಚಾಂಪಿಯನ್‌ಶಿಪ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.
ಇಂಗ್ಲೆಂಡ್‌ನ ಅಂಡರ್-20 ತಂಡ ಈ ವರ್ಷಾರಂಭದಲ್ಲಿ ಕೊರಿಯಾದಲ್ಲಿ ವಿಶ್ವಕಪ್‌ನ್ನು ಜಯಿಸಿತ್ತು. ಅಂಡರ್-19 ತಂಡ ಯುರೋಪಿಯನ್ ಚಾಂಪಿಯನ್ ಎನಿಸಿಕೊಂಡಿತ್ತು. ಈಗ ಅಂಡರ್-17 ತಂಡ ವಿಶ್ವಕಪ್ ಚಾಂಪಿಯನ್ ಆಗುವ ವಿಶ್ವಾಸ ಮೂಡಿಸಿದೆ.
2013ರ ಡಿಸೆಂಬರ್‌ನಲ್ಲಿ ಅಂಡರ್-17 ವಿಶ್ವಕಪ್ ಆತಿಥ್ಯದ ಹಕ್ಕನ್ನು ಪಡೆದಿದ್ದ ಭಾರತ ಪ್ರೇಕ್ಷಕರ ಹಾಜರಾತಿ ಹಾಗೂ ಗರಿಷ್ಠ ಗೋಲುಗಳ ವಿಚಾರದಲ್ಲಿ ದಾಖಲೆ ನಿರ್ಮಿಸುವತ್ತ ಹೆಜ್ಜೆ ಇಟ್ಟಿದೆ. ಟೂರ್ನಿಯಲ್ಲಿ ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯಗಳು ಆಡಲು ಬಾಕಿ ಉಳಿದಿದೆ. ಈತನಕ ನಡೆದಿರುವ 50 ಪಂದ್ಯಗಳಲ್ಲಿ 1,224,027 ಪ್ರೇಕ್ಷಕರು ಪಂದ್ಯ ವೀಕ್ಷಿಸಿದ್ದಾರೆ. 1985ರಲ್ಲಿ ಚೀನಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 1,230,976 ಪ್ರೇಕ್ಷಕರು ಪಂದ್ಯ ವೀಕ್ಷಿಸಿದ್ದರು. ಚೀನಾದ ದಾಖಲೆಯನ್ನು ಮುರಿಯುವತ್ತ ಭಾರತ ಮುಂದಡಿ ಇಟ್ಟಿದೆ. ಪ್ರಸ್ತುತ ವಿಶ್ವಕಪ್‌ನಲ್ಲಿ 50 ಪಂದ್ಯಗಳಲ್ಲಿ 170 ಗೋಲುಗಳು ದಾಖಲಾಗಿದ್ದು, 2013ರಲ್ಲಿ ಯುಎಇನಲ್ಲಿ ದಾಖಲಾಗಿದ್ದ ಗರಿಷ್ಠ ಗೋಲುಗಳ ದಾಖಲೆ(172)ಪತನವಾಗಲು ಕೇವಲ 3 ಗೋಲುಗಳ ಅಗತ್ಯವಿದೆ.
ಸೆಮಿ ಫೈನಲ್‌ನಲ್ಲಿ ಪ್ರಶಸ್ತಿ ಫೇವರಿಟ್ ಬ್ರೆಝಿಲ್‌ನ್ನು ಮಣಿಸಿದ್ದ ಇಂಗ್ಲೆಂಡ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇಂಗ್ಲೆಂಡ್ ಟೂರ್ನಿಯಲ್ಲಿ ಆಡಿರುವ ಎಲ್ಲ ಪಂದ್ಯಗಳನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿದೆ. ಜಪಾನ್ ವಿರುದ್ದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ಸಾಧಿಸಿತ್ತು. ಆದರೆ ಸ್ಪೇನ್ ಟೂರ್ನಿಯ ಮೊದಲ ಪಂದ್ಯದಲ್ಲೇ ಬ್ರೆಝಿಲ್‌ಗೆ ಶರಣಾಗಿತ್ತು.
ಸ್ಪೇನ್ ಹಾಗೂ ಇಂಗ್ಲೆಂಡ್ ಯುರೋಪಿಯನ್ ಅಂಡರ್-17 ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದು, ಸ್ಪೇನ್ 2 ಬಾರಿ ಜಯ ಸಾಧಿಸಿದೆ. ಇಂಗ್ಲೆಂಡ್‌ನ ಸ್ಟಾರ್ ಸ್ಟ್ರೈಕರ್ ರಿಯಾನ್ ಬ್ರೆವ್‌ಸ್ಟರ್ ಹಾಗೂ ಸ್ಪೇನ್‌ನ ನಾಯಕ ಅಬೆಲ್ ರುಯಿಝ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಇಬ್ಬರು ತಮ್ಮ ತಂಡವನ್ನು ಫೈನಲ್‌ಗೆ ತಲುಪಿಸಿದ್ದಾರೆ.
ಬ್ರೆವ್‌ಸ್ಟರ್ ಬ್ರೆಝಿಲ್ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿ ಇಂಗ್ಲೆಂಡ್‌ನ್ನು ಫೈನಲ್‌ಗೆ ತಲುಪಿಸಿದ್ದರು. ಬ್ರೆವ್‌ಸ್ಟರ್ ಟೂರ್ನಿಯಲ್ಲಿ 2ನೆ ಬಾರಿ ಹ್ಯಾಟ್ರಿಕ್ ದಾಖಲಿಸಿದ್ದರು. ರುಯಿಝ್ ಅವರು ಮಾಲಿ ವಿರುದ್ಧದ ಸೆಮಿ ಫೈನಲ್‌ನಲ್ಲಿ ಅವಳಿ ಗೋಲು ಬಾರಿಸಿ ಸ್ಪೇನ್ ತಂಡ ಫೈನಲ್ ತಲುಪಲು ನೆರವಾಗಿದ್ದರು. ಈ ಇಬ್ಬರು ಕ್ರಮವಾಗಿ 7 ಹಾಗೂ 6 ಗೋಲುಗಳನ್ನು ಬಾರಿಸಿದ್ದಾರೆ. ‘ಗೋಲ್ಡನ್ ಬೂಟ್’ ಪ್ರಶಸ್ತಿಯ ರೇಸ್ ನಲ್ಲಿದ್ದಾರೆ.







