ಕೇಂದ್ರದ ಯೋಜನೆ ಮುಂದಿಟ್ಟು ಚುನಾವಣೆಗೆ ತಯಾರಿ: ಪ್ರತಾಪ ಸಿಂಹ
ಮೂಡಿಗೆರೆ, ಅ.27: ಕೇಂದ್ರದ ಜನಪರ ಯೋಜನೆಯನ್ನು ಮುಂದಿಟ್ಟು ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಅವರು ಶುಕ್ರವಾರ ಪಟ್ಟಣದ ಲ್ಯಾಂಪ್ಸ್ ಸಹಕಾರ ಸಂಘದ ಭವನದಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರದ ಉಜ್ವಲ ಯೋಜನೆ, ತ್ರಿಬ್ಬಲ್ ತಲಾಕ್‌ನಿಂದ ಮಹಿಳೆಯರಿಗೆ ವಿಷೇಶ ಚೈತನ್ಯ ಬಂದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗಳಿಸಿ ರಾಜ್ಯದಲ್ಲಿ ಅಧಿಕಾಕ್ಕೇರುವುದರಲ್ಲಿ ಸಂದೇಹವೇ ಇಲ್ಲ ಎಂದ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನತೆಗೆ ನಿರಂತರವಾಗಿ ಮೋಸ ಮಾಡುತ್ತಿದೆ. ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಕೇಂದ್ರ ಸರಕಾರ ಬಿಡುಗಡೆ ಮಾಡಿದ ಹಣದಲ್ಲಿ ಬೇಕಾಬಿಟ್ಟಿ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯ ಸರಕಾರದ ಈ ಧೋರಣೆ ಯಾರದೊ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ ಎಂದು ಟೀಕಿಸಿದರು.
ಎಮ್ಮೆಲ್ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಸೇರಿಕೊಂಡು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿಸಲು ಪಣ ತೊಟ್ಟಿದ್ದಾರೆ. ಮುಂದಿನ ವಿಧಾನಸಬಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತಗೊಳ್ಳಲಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ದುಂಡುಗ ಪ್ರಮೋದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಚೈತ್ರಾಶ್ರೀ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ತಾಪಂ ಅಧ್ಯಕ್ಷ ಕೆ.ಸಿ.ರತನ್, ಮುಖಂಡರಾದ ಸುದರ್ಶನ್, ಹಳಸೆ ಶಿವಣ್ಣ, ಕಲ್ಲೇಶ್, ಪುಣ್ಯಪಾಲ್, ಜೆ.ಎಸ್.ರಘು, ಜಯಂತ್, ಸಂಪತ್ ಆಲ್ದೂರು, ವಿನೋದ್ ಕಣಚೂರು, ಪ್ರವೀಣ್ ಪೂಜಾರಿ ಮತ್ತಿತರರಿದ್ದರು.







