ಶ್ರೇಯಸ್ ಸಾಹಸ: ಕರ್ನಾಟಕಕ್ಕೆ ಜಯ
ಪಂದ್ಯಶ್ರೇಷ್ಠ: ಕರುಣ್ ನಾಯರ್

ಶಿವಮೊಗ್ಗ, ಅ.27: ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಸಾಹಸದಿಂದ ಕರ್ನಾಟಕ ತಂಡ ಹೈದರಾಬಾಬ್ ವಿರುದ್ಧದ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ 59 ರನ್‌ಗಳಿಂದ ಜಯ ಸಾಧಿಸಿದೆ. ಶ್ರೇಯಸ್ ಎರಡನೆ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ಸಹಿತ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕರ್ನಾಟಕ ಟೂರ್ನಿಯಲ್ಲಿ ಸತತ 2ನೆ ಜಯ ದಾಖಲಿಸಿತು.
ಗೆಲ್ಲಲು 380 ರನ್ ಬೆನ್ನಟ್ಟಿದ ಹೈದರಾಬಾದ್ ತಂಡ 109.4 ಓವರ್‌ಗಳಲ್ಲಿ 320 ರನ್‌ಗೆ ಸರ್ವಪತನವಾಯಿತು. ಬಿ.ಸಂದೀಪ್(80)ತಂಡದ ಪರ ಸರ್ವಾಧಿಕ ರನ್ ಗಳಿಸಿದರು.
ಹೈದರಾಬಾದ್ ತಂಡ 4ನೆ ದಿನವಾದ ಶುಕ್ರವಾರ 4 ವಿಕೆಟ್‌ಗಳ ನಷ್ಟಕ್ಕೆ 117 ರನ್‌ಗಳಿಂದ 2ನೆ ಇನಿಂಗ್ಸ್ ಮುಂದುವರಿಸಿತು. ಆರಂಭಿಕ ತನ್ಮಯ್ ಅಗರವಾಲ್(44) ಹಾಗೂ ನಾಯಕ ಅಂಬಟಿ ರಾಯುಡು(31) 5ನೆ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ಸ್ಟುವರ್ಟ್ ಬಿನ್ನಿ ಬೇರ್ಪಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಸಂದೀಪ್(80ರನ್, 205 ಎಸೆತ, 10 ಬೌಂಡರಿ) ಹಾಗೂ ಆಶೀಷ್ ರೆಡ್ಡಿ(ಅಜೇಯ 57,98 ಎಸೆತ, 5 ಬೌಂಡರಿ, 3 ಸಿಕ್ಸರ್) ಅರ್ಧಶತಕ ದಾಖಲಿಸಿ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಸ್ಪಿನ್ನರ್ ಎಸ್.ಗೋಪಾಲ್ ಹೈದರಾಬಾದ್‌ನ ಕೆಳ ಕ್ರಮಾಂಕದ ಆಟಗಾರರಿಗೆ ಬೇಗನೆ ಪೆವಿಲಿಯನ್ ಹಾದಿ ತೋರಿಸಿದರು. ಗೋಪಾಲ್‌ಗೆ ಸಮರ್ಥ ಸಾಥ್ ನೀಡಿದ ಕೆ.ಗೌತಮ್ 92 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿದರು. ಪಂದ್ಯದಲ್ಲಿ ಒಟ್ಟು 6 ವಿಕೆಟ್ ಉರುಳಿಸಿದರು. ಕರ್ನಾಟಕದ ಎರಡನೆ ಇನಿಂಗ್ಸ್‌ನಲ್ಲಿ 229 ಎಸೆತಗಳಲ್ಲಿ 134 ರನ್ ಕಲೆ ಹಾಕಿದ್ದ ಕರುಣ್ ನಾಯರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.







