ನೌಕರರು-ಸಾರ್ವಜನಿಕರ ಸಂಬಂಧ ಉತ್ತಮವಾಗಿರಲಿ: ಅಶೋಕ ಗುರಾಣಿ

ಮುಂಡಗೋಡ, ಅ.27: ಸರಕಾರಿ ನೌಕರರು ಜನರ ಜತೆ ಉತ್ತಮ ಬಾಂಧವ್ಯ ಇಟ್ಟು ಸರಕಾರಿ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ಮಾಡಿದರೆ ಜನರು ತಮ್ಮನ್ನು ಬೇರೆಡೆಗೆ ಬಿಟ್ಟುಕೊಡಲು ಒಪ್ಪುವುದಿಲ್ಲ ಇದಕ್ಕೆ ಪದೋನ್ನತಿ ಹೊಂದಿರುವ ಅಭಿಯಂತರ ವಿ.ವಿ.ಸಜ್ಜನ ತಾಲೂಕಿನಲ್ಲಿ ಒಂದೇ ಇಲಾಖೆಯಲ್ಲಿ 9 ವರ್ಷ ಸೇವೆ ಮಾಡಿರುವುದೇ ಸಾಕ್ಷಿ ಎಂದು ತಾಲೂಕಾ ದಂಡಾಧಿಕಾರಿ ಅಶೋಕ ಗುರಾಣಿ ಹೇಳಿದ್ದಾರೆ.
ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಸ್ಥಾನದಿಂದ ಕಾರ್ಯನಿರ್ವಾಹಕರಾಗಿ ಪದೋನ್ನತಿ ಹೊಂದಿ ಶಿರಸಿ ವಿಭಾಗಕ್ಕೆ ವರ್ಗಾವಣೆಗೊಂಡಿರುವ ವಿ.ವಿ.ಸಜ್ಜನರಿಗೆ ಲೋಕೊಪಯೋಗಿ ಮುಂಡಗೋಡ ಸಹಾಯಕ ಕಾರ್ಯನಿವಾಹಕ ಕಚೇರಿ ಸಿಬ್ಬಂದಿ ಏರ್ಪಡಿಸಿದ್ದ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ವಿ.ವಿ. ಸಜ್ಜನರ ಅವಧಿಯಲ್ಲಿ ಸಾಕಷ್ಟು ಉತ್ತಮ ರಸ್ತೆಗಳು, ಕಟ್ಟಡಗಳು, ನಿರ್ಮಾಣಗೊಂಡಿವೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ವಿ. ಸ ಜ್ಜನ , ತನಗೆ ಇಲ್ಲಿಯ ಜನರ ಪ್ರೀತಿ ವಿಶ್ವಾಸದಿಂದ ದೂರವಾಗಲು ಬೇಸರವಾಗುತ್ತಿದೆ. ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ವಿ.ಎಸ್.ಪಾಟೀಲ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಟಿ.ಪಾಟೀಲ, ಹಳಿಯಾಳ ಲೋಕೋಪಯೋಗಿ ಇಲಾಖೆಯ ಆರ್.ಎಚ್.ಕುಲಕರ್ಣಿ, ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಾ ಹಿರಳ್ಳಿ ಮಾತನಾಡಿದರು. ವಿ.ವಿ ಸಜ್ಜನರ ಪುತ್ರ ಸಚಿನ್, ಪುತ್ರಿ ಡಾ.ಅನುಷಾ, ಯಲ್ಲಾಪುರ ಸಿದ್ದಾಪುರ, ಶಿರಸಿ, ಜೊಯಿಡಾ ಲೋಕೋಪಯೋಗಿ ಇಲಾಖೆಯ ಇಂಜಿನಿಯರರು, ಮುಂಡಗೋಡ ಸ.ಕಾ.ನಿ ಇಂಜಿನಿಯರ್ ಪುರಾಣಿಕ, ಗುತ್ತಿಗೆದಾರರಾದ ಸಜ್ಜನ ಶೆಟ್ಟರ, ನರೆಗಲ್, ಆರಾಧ್ಯಮಠ, ಮಧುಕರ, ಮುಂತಾದವರು ಉಪಸ್ಥಿತರಿದ್ದರು. ಮಂಜುನಾಥ ಸಾಳೊಂಕೆ ನಿರೂಪಿಸಿದರು.







