ಮತ್ತೊಮ್ಮೆ ಮಿಂಚಿದ ಅಲಿ: ಪಾಕ್‌ಗೆ ಭರ್ಜರಿ ಜಯ

ಅಬುಧಾಬಿ, ಅ.27: ವೇಗಿ ಹಸನ್ ಅಲಿ ಜೀವನಶ್ರೇಷ್ಠ ಬೌಲಿಂಗ್ ದಾಳಿಯ ನೆರವಿನಲ್ಲಿ ಪಾಕಿಸ್ತಾನ ತಂಡ ಇಲ್ಲಿ ಗುರುವಾರ ರಾತ್ರಿ ನಡೆದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ ಯುವ ವೇಗಿ ಹಸನ್ ಅಲಿ (23ಕ್ಕೆ 3), ಆಫ್-ಸ್ಪಿನ್ನರ್ ಮುಹಮ್ಮದ್ ಹಫೀಝ್(10ಕ್ಕೆ 2) ಮತ್ತು ಎಡಗೈ ವೇಗಿ ಉಸ್ಮಾನ್ ಶಿನ್ವಾರಿ(20ಕ್ಕೆ2) ದಾಳಿಗೆ ಸಿಲುಕಿ 18.3 ಓವರ್‌ಗಳಲ್ಲಿ 102 ರನ್‌ಗಳಿಗೆ ಆಲೌಟಾಗಿತ್ತು.
ಗೆಲ್ಲಲು 103 ರನ್‌ಗಳ ಸುಲಭ ಸವಾಲು ಪಡೆದ ಪಾಕಿಸ್ತಾನ ತಂಡ ಶುಐಬ್ ಮಲಿಕ್(ಔಟಾಗದೆ 42) ಮತ್ತು ಮುಹಮ್ಮದ್ ಹಫೀಝ್(ಔಟಾಗದೆ 25) ಸಹಾಯದಿಂದ ಇನ್ನೂ 16 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಪಾಕಿಸ್ತಾನ 18 ರನ್ ಗಳಿಸುವಷ್ಟರಲ್ಲಿ ಆರಂಭಿಕ ದಾಂಡಿಗರಾದ ಫಾಕರ್ ಝಮಾನ್(6) ಮತ್ತು ಬಾಬರ್ ಆಝಮ್(1) ವಿಕೆಟ್‌ನ್ನು ಕಳೆದುಕೊಂಡಿತ್ತು. ಆದರೆ ಮಲಿಕ್ ತಂಡವನ್ನು ಆಧರಿಸಿ 31 ಎಸೆತಗಳಲ್ಲಿ 4 ಬೌಂಡರಿಗಳಿರುವ 42 ರನ್ ಸಿಡಿಸಿದರು.
ಈ ಗೆಲುವಿನೊಂದಿಗೆ ಪಾಕಿಸ್ತಾನ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಐದು ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಿತ್ತು. ಅಲಿ ಒಟ್ಟು 14 ವಿಕೆಟ್‌ಗಳನ್ನು ಪಡೆದು ಪಾಕ್‌ಗೆ ಸರಣಿ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದರು.
ಶ್ರೀಲಂಕಾದ ಕಳಪೆ ಪ್ರದರ್ಶನ ಮತ್ತೆ ಮುಂದುವರಿದಿದೆ. ಟ್ವೆಂಟಿ-20 ಪಂದ್ಯದಲ್ಲಿ ಅಲಿ ಪ್ರಹಾರ ನೀಡುವ ಮೊದಲು ಸ್ಪಿನ್ನರ್‌ಗಳು ಲಂಕಾದ ಅಗ್ರ ಸರದಿಯ ದಾಂಡಿಗರನ್ನು ಪೆವಿಲಿಯನ್ ಅಟ್ಟುವ ಮೂಲಕ ಆಘಾತ ನೀಡಿದ್ದರು.
ದಿಲ್ಶನ್ ಮುನಾವೀರ್ ಎಡಗೈ ಸ್ಪಿನ್ನರ್ ಇಮಾದ್ ವಸೀಮ್ ಅವರ ಓವರ್‌ನ ಮೂರನೆ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ದರು. ಧನುಷ್ಕ ಗುಣತಿಲಕ (18) ಎಡಗೈ ವೇಗಿ ಉಸ್ಮಾನ್ ಶಿನ್ವಾರಿಗೆ ವಿಕೆಟ್ ಒಪ್ಪಿಸಿದರು.
ಸದೀರಾ ಸಮರವಿಕ್ರಮ್ (23) ಮತ್ತು ಸಿಕ್ಕುಗೆ ಪ್ರಸನ್ನ(ಔಟಾಗದೆ 23) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದವರು. ಸಮರ ವಿಕ್ರಮ್ ಅವರು ಫಹೀಮ್ ಅಶ್ರಫ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆಫ್-ಸ್ಪಿನ್ನರ್ ಮುಹಮ್ಮದ್ ಹಫೀಝ್ ಮೇಡನ್ ಓವರ್‌ನಲ್ಲಿ ಎರಡು ವಿಕೆಟ್ ಉಡಾಯಿಸಿದರು. ಎಂಟು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಆಡಿದ ಮಹೇಲ ಉಡವಾಟ್ಟೆ (8) ಅವರನ್ನು ಹಫೀಝ್ 12ನೆ ಓವರ್‌ನ ಮೊದಲ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಅದೇ ಓವರ್‌ನ ನಾಲ್ಕನೆ ಎಸೆತದಲ್ಲಿ ದಾಸಮ್ ಶನಕ (0) ವಿಕೆಟ್ ಪಡೆದರು. ಇದರೊಂದಿಗೆ ಶ್ರೀಲಂಕಾ 11.4 ಓವರ್‌ಗಳಲ್ಲಿ 66ಕ್ಕೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಮುಂದೆ ಪತನಗೊಂಡ ಶ್ರೀಲಂಕಾದ 4 ವಿಕೆಟ್‌ಗಳಲ್ಲಿ 3ನ್ನು ಅಲಿ ಕಬಳಿಸಿದರು.
ಸಚಿತ ಪಥಿರಣ(4), ಇಸ್ರು ಉದಾನ(0) ಮತ್ತು ವಿಕುಮ್ ಸಂಜಯ್(4) ವಿಕೆಟ್‌ನ್ನು ಹಸನ್ ಪಡೆಯುವ ಮೂಲಕ ಟ್ವೆಂಟಿ-20 ಕ್ರಿಕೆಟ್ ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದರು. ತಿಸ್ಸರಾ ಪೆರೆರಾ(6) ಅವರಿಗೆ ಶಿನ್ವಾರಿ ಪೆವಿಲಿಯನ್ ಹಾದಿ ತೋರಿಸಿದರು.
ಸಿಕ್ಕುಗೆ ಪ್ರಸನ್ನ ಔಟಾಗದೆ 23 ರನ್ ಗಳಿಸುವ ಮೂಲಕ ತಂಡದ ಸ್ಕೋರನ್ನು 100ರ ಗಡಿ ದಾಟಿಸಿದರು.







