ವಿಶ್ವ ಚರ್ಮ ರೋಗ ದಿನದ ಅಂಗವಾಗಿ ಅ.29ರಂದು ಜಾಗೃತಿ ಅಭಿಯಾನ
ಬೆಂಗಳೂರು, ಅ.28: ವಿಶ್ವ ಚರ್ಮರೋಗದ ದಿನದ ಅಂಗವಾಗಿ ಅ.29ರಂದು ಭಾರತೀಯ ಚರ್ಮರೋಗ, ಲೈಂಗಿಕ ರೋಗ ಮತ್ತು ಕುಷ್ಟರೋಗ ತಜ್ಞರುಗಳ ಸಂಘದ ವತಿಯಿಂದ ರಾಜ್ಯದ ಹಲವು ಭಾಗಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ.ರಘುನಾಥರೆಡ್ಡಿ, ಚರ್ಮರೋಗ ಸಂಬಂಧ ಹಲವರಲ್ಲಿ ಅನುಮಾನಗಳು, ತಪ್ಪುಕಲ್ಪನೆಗಳು ಹಾಗೂ ಮೂಢನಂಬಿಕೆಗಳಿವೆ. ಈ ನಿಟ್ಟಿನಲ್ಲಿ ಮಂಗಳೂರು, ಹುಬ್ಬಳ್ಳಿ ಜಿಲ್ಲಾ ಕೇಂದ್ರಗಳಲ್ಲಿ ಮ್ಯಾರಥಾನ್ ಓಟ ಹಾಗೂ ಬೆಂಗಳೂರು ನಗರದ ಸಿಟಿ ರೈಲ್ವೆ ನಿಲ್ದಾಣ, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಹಲವು ಕಡೆಗಳಲ್ಲಿ ಈ ಕುರಿತು ಕರಪತ್ರ ಹಂಚಿಕೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಚರ್ಮ ರೋಗ ಒಂದು ಇಮ್ಯೂನ್ ಖಾಯಿಲೆಯಾಗಿದ್ದು, ಸೋರಿಯಾಸಿಸ್ ಪೀಡಿತ ಚರ್ಮದಲ್ಲಿ ಜೀವಕೋಶಗಳು ಸಹಜ ಸ್ಥಿತಿಗಿಂದ ಅತಿಯಾಗಿ ವೃದ್ಧಿಗೊಳ್ಳುವುದಲ್ಲದೆ, ಈ ಜೀವ ಕೋಶಗಳು ಹೆಚ್ಚಾಗಿ ಶೇಖರಗೊಂಡು ಪದರ ಪದರವಾಗಿ ಕಾಣುತ್ತವೆ. ಈ ರೋಗವು ಅಂಟು ರೋಗ ಅಥವಾ ಸಾಂಕ್ರಾಮಿಕ ರೋಗವಲ್ಲ. ಅಲ್ಲದೆ, ಇದು ಕೆಲವರಲ್ಲಿ ಅನುವಂಶೀಯವಾಗಿ ಬರುತ್ತದೆ ಎಂದರು.
ಸೋರಿಯಾಸಿಸ್ ಅಥವಾ ಚರ್ಮರೋಗ ಶಾಶ್ವತ ಚಿಕಿತ್ಸೆ ಸಿಗಲಿಲ್ಲವಾದರೂ, ಸಮತೋಲನ ಆಹಾರ ಹಾಗೂ ವೈದ್ಯರ ಸಲಹೆಯಿಂದ ರೋಗವನ್ನು ನಿಯಂತ್ರಿಸಬಹುದಾಗಿದೆ. ಬಹುತೇಕ ರೋಗಿಗಳಲ್ಲಿ ಇದು ಮಾನಸಿಕ ಒತ್ತಡಕ್ಕೆ ಗುರಿ ಪಡಿಸುತ್ತದೆ. ದೀರ್ಘಾವಧಿ ಖಾಯಿಲೆಯಾಗಿರುವುದರಿಂದ ರೋಗಿಯು ಖಿನ್ನತೆಗೆ ಒಳಗಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ, ಈ ರೋಗ ಕಂಡ ಕೂಡಲೇ ಚಿಕಿತ್ಸೆ ಪಡೆಯುವುದರಿಂದ ಸಹ ಜೀವನ ನಡೆಸಬಹದು ಎಂದು ಅವರು ಸಲಹೆ ನೀಡಿದರು.







