ಅಯೋಧ್ಯೆ ವಿವಾದ ರವಿಶಂಕರ್ ಮಧ್ಯಸ್ಥಿಕೆ: ಕಾಂಗ್ರೆಸ್ ಶ್ಲಾಘನೆ

ಹೊಸದಿಲ್ಲಿ, ಅ. 28: ಬಾಬರಿ ಮಸೀದಿ-ರಾಮಮಂದಿರ ಪ್ರಕರಣದಲ್ಲಿ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿರುವ ಹಾಗೂ ಅವರ ನಡುವೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಅವರ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಶನಿವಾರ ಶ್ಲಾಘಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ನಾಯಕ ಟಾಮ್ ವಡಕ್ಕನ್, ಇಂತಹ ಪ್ರಯತ್ನ ಮಾಡುತ್ತಿರುವ ರವಿಶಂಕರ್ ಪ್ರಶಂಸಾರ್ಹರು ಎಂದಿದ್ದಾರೆ. ಈ ಪ್ರಕರಣದ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್, ವಿವಾದವನ್ನು ನ್ಯಾಯಾಲಯದ ಹೊರಗೆ ಪರಿಹರಿಸಿಕೊಳ್ಳಿ ಎಂದು ಹೇಳಿತ್ತು. ಈ ಹಿನ್ನಲೆಯಲ್ಲಿ ವಿವಾದ ಬಗೆಹರಿಸಲು ರವಿಶಂಕರ್ ಅವರು ಪ್ರಯತ್ನಿಸುತ್ತಿರುವುದು ಸ್ವಾಗತಾರ್ಹ. ಮುಖ್ಯವಾದ ವಿಚಾರವೆಂದರೆ, ಪಾಲುದಾರರ ನಡುವೆ ಈ ಬಗ್ಗೆ ಸಮರ್ಪಕವಾಗಿ ಚರ್ಚೆ ನಡೆಯಬೇಕು. ಯಾರ ಮೇಲೂ ಒತ್ತಡ ಹೇರಬಾರದು. ಈ ವಿವಾದ ಸರ್ವಸಮ್ಮತವಾಗಿ ಪರಿಹಾರವಾದರೆ ದೇಶಕ್ಕೆ ಉತ್ತಮ ಎಂದು ಅವರು ಹೇಳಿದ್ದಾರೆ.
ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಇನ್ನೋರ್ವ ಕಾಂಗ್ರೆಸ್ ನಾಯಕ ಕೆ.ಟಿ.ಎಸ್. ತುಳಸಿ ಅವರು, ರವಿಶಂಕರ್ ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸುತ್ತಿರುವುದು ಸ್ವಾಗತಾರ್ಹ ಎಂದಿದ್ದಾರೆ.





