ಪ್ರತಿಭಾ ಪ್ರದರ್ಶನಕ್ಕೆ ಕಲಾಶ್ರೀ ಶಿಬಿರ ಪೂರಕ: ಗ್ರೇಸಿ

ಉಡುಪಿ, ಅ.28: ಗ್ರಾಮೀಣ ಪ್ರತಿಭೆಗಳ ಪ್ರದರ್ಶನಕ್ಕೆ ಕಲಾಶ್ರೀ ಶಿಬಿರಗಳು ಪೂರಕವಾಗಿದ್ದು ಜಿಲ್ಲೆಯ ವಿದ್ಯಾರ್ಥಿಗಳು ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಹೇಳಿದ್ದಾರೆ.
ಶನಿವಾರ ಉಡುಪಿ ಬಾಲಭವನದಲ್ಲಿ ನಡೆದ ಕಲಾಶ್ರೀ ಶಿಬಿರದ ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಿಬಿರದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ಆಯೋಜನೆ ಜೊತೆಗೆ ತಾಲೂಕು ಮಟ್ಟದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸೃಜನಾತ್ಮಕ ಬರವಣಿಗೆ, ಪ್ರದರ್ಶನ ಕಲೆ, ವಿಜ್ಞಾನ ಮಾದರಿಗಳಿಗೆ ಸಂಬಂಧಿಸಿದ ಸ್ಪರ್ಧೆಗಳು ನಡೆದವು. ಚಿತ್ರಕಲೆ ಸ್ಪರ್ಧೆಗೆ ಸ್ವಚ್ಛ ಭಾರತ್ ವಿಷಯವನ್ನು ನೀಡಲಾಗಿತ್ತು.
ಜಿಲ್ಲಾ ಮಟ್ಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನ.11ರಿಂದ 14ರವರೆಗೆ ಬೆಂಗಳೂರಿನಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಪಾಲ್ಗೊಂಡ ಎಲ್ಲ ವಿದ್ಯಾರ್ಥಿ ಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ 24 ವಿದ್ಯಾರ್ಥಿಗಳು ಪಾಲ್ಗೊಂಡರು.
ತೀರ್ಪುಗಾರರಾಗಿ ಯೋಗೀಶ್ ಕೊಳಲ್‌ಗಿರಿ, ಮಂಜುನಾಥ್ ಬೈಲೂರು, ಶೇಖಾ ಮರಾಠೆ, ಶೋಭಾ ಯೋಗೀಶ್, ನಿತ್ಯಾನಂದ ಶೆಟ್ಟಿಗಾರ, ಪ್ರಶಾಂತ್ ಬಿರ್ತಿ, ಜಯಂತಿ, ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿ ನಿರಂಜನ್ , ಸರ್ವೇಶ್ವರ್ ಉಪಸ್ಥಿತರಿದ್ದರು.







