‘ವಿಕಲಚೇತನರು ಕೌಶಲ್ಯ ವೃದ್ಧಿಸಿಕೊಂಡು ಸ್ವಾವಲಂಬಿಗಳಾಗಿ’ : ಡಾ.ರಾಮಚಂದ್ರ ಕಾಮತ್

ಉಡುಪಿ, ಅ.28: ವಿಕಲಚೇತನರು ಸ್ವಾವಲಂಬಿಗಳಾಗಿ ಬದುಕಬೇಕು. ಇದಕ್ಕಾಗಿ ಕೌಶಲ್ಯವನ್ನು ಪಡೆದುಕೊಳ್ಳಬೇಕು ಎಂದು ಮಣಿಪಾಲ ಕೆಎಂಸಿಯ ವೈದ್ಯ ಡಾ.ರಾಮಚಂದ್ರ ಕಾಮತ್ ಹೇಳಿದ್ದಾರೆ.
ಶನಿವಾರ ಉಡುಪಿ ರೆಡ್‌ಕ್ರಾಸ್ ಸಭಾಂಗಣದಲ್ಲಿ ವಿಕಲಚೇತನ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಉಡುಪಿ, ಅಸೋಸಿಯೇಶನ್ ಆಪ್ ಪೀಪಲ್ ವಿತ್ ಡೆಸೆಬಿಲಿಟಿ ಸಂಸ್ಥೆ ಬೆಂಗಳೂರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕ ಹಾಗೂ ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರ ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿವಿಧ ರೀತಿಯ ಉದ್ಯೋಗ ತರಬೇತಿಗೆ ಅರ್ಹ ವಿಕಲಚೇತನರ ಆಯ್ಕೆ ಶಿಬಿರದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯಲ್ಲಿ ಒಟ್ಟು 16 ಸಾವಿರ ನೊಂದಾಯಿತ ವಿಕಲಚೇತನ ರಿದ್ದಾರೆ. ವಿಕಲಚೇತನರು ತಾವು ಅವಲಂಬಿಗಳು ಎಂಬ ಮನೋಸ್ಥಿತಿಯಿಂದ ಹೊರಬಂದು ತನ್ನ ಸಾಮರ್ಥ್ಯ ಹಾಗೂ ಕೌಶಲ ವೃದ್ಧಿಸುವ ತರಬೇತಿಯನ್ನು ಪಡೆದು ಸ್ವಾವಲಂಬಿಯಾಗಿ ಬದುಕಬೇಕು ಎಂದರು.
ಜಿಲ್ಲಾ ವಿಕಲಚೇತನ ಮತ್ತು ಹಿರಿಯ ಸಬಲೀಕರಣ ಅಧಿಕಾರಿ ನಿರಂಜನ್ ಭಟ್ ಮಾತನಾಡಿ, ವಿಕಲತೆಯನ್ನು ಸವಾಲಾಗಿರಿಸಿಕೊಂಡು ಸ್ವತಂತ್ರವಾಗಿ ಕೆಲಸ ಮಾಡಿ ಸ್ವಾವಲಂಬಿ ಜೀವನ ನಡೆಸಿದರೆ ಅದು ಬದುಕಿಗೆ ದಾರಿ. ಯುವಜನರು ಇಂಥ ತರಬೇತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಿಗುವ ಅವಕಾಶ ಗಳನ್ನು ಬಳಸಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಬೆಂಗಳೂರು ಎಪಿಡಿ ಸಂಸ್ಥೆ ತರಬೇತಿದಾರರಾದ ಜ್ಯೋತಿ ತಮ್ಮ ಸಂಸ್ಥೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಎಡಿಪಿ ಸಂಸ್ಥೆಯ ರಮ್ಯಾ, ಶ್ರೀಧರ್ ಉಪಸ್ಥಿತರಿದ್ದರು. ಘಟಕದ ಮೇಲ್ವಿಚಾರಕ ಸುಧೀಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಹಿರಿಯ ನಾಗರಿಕ ಸಲಹೆ ಕೇಂದ್ರ ಸಂಯೋಜಕ ಗಣೇಶ್ ವಂದಿಸಿದರು.







