ಕೈಗಾರಿಕೆಗಳಿಗೆ ಅನಿರ್ಬಂದಿತ ‘ಸ್ಪಿರಿಟ್’ ಪೂರೈಕೆಯಿಂದ ನಕಲಿ ಮದ್ಯ ದಂಧೆ ಆತಂಕ: ಸಚಿವ ತಿಮ್ಮಾಪುರ್
ಬೆಂಗಳೂರು, ಅ. 28: ಕೈಗಾರಿಕೆಗಳಿಗೆ ‘ಸ್ಪಿರಿಟ್’ ಒದಗಿಸುವ ಸಂಬಂಧ ಈ ಹಿಂದೆ ಇದ್ದ ನಿರ್ಬಂಧವನ್ನು ಕೇಂದ್ರ ಸರಕಾರ ಸಡಿಲಿಸಿದೆ. ಇದರಿಂದ ನಕಲಿ ಮದ್ಯ ತಯಾರಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸಂಶಯ ವ್ಯಕ್ತಪಡಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳಿಂದ ದೊರೆಯುವ ‘ಸ್ಪಿರಿಟ್’ ಅನ್ನು ಈ ಹಿಂದೆ ಡಿಸ್ಟಿಲರಿಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಇದೀಗ ಕೈಗಾರಿಕೆಗಳಿಗೆ ಸ್ಪಿರಿಟ್ ಪೂರೈಕೆಗೆ ಯಾವುದೇ ನಿರ್ಬಂಧವಿಲ್ಲ. ಅಲ್ಲದೆ, ರಾಜ್ಯ ಸರಕಾರಕ್ಕೂ ಇದರ ಮೇಲೆ ನಿಯಂತ್ರಣ ಹೇರುವ ಅಧಿಕಾರವಿಲ್ಲ. ಹೀಗಾಗಿ ನಕಲಿ ಮದ್ಯದ ದಂಧೆ ಆರಂಭಗೊಳ್ಳುವ ಆತಂಕವಿದೆ. ಆದುದರಿಂದ ಈ ಸಂಬಂಧ ಸೂಕ್ತ ಸ್ಪಷ್ಟಣೆ ನೀಡಬೇಕೆಂದು ಕೋರಿ ಕೇಂದ್ರ ಸರಕಾರ ಶೀಘ್ರದಲ್ಲೇ ಪತ್ರ ಬರೆಯಲಾಗುವುದು. ಕೈಗಾರಿಕೆಗಳಿಗೆ ಸ್ಪಿರಿಟ್ ಪೂರೈಕೆಗೆ ನಿರ್ಬಂಧ ಹೇರುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.
ಹೊಸ ಪರವಾನಿಗೆ ಸದ್ಯಕ್ಕಿಲ್ಲ: ಜನಸಂಖ್ಯೆ ಆಧರಿಸಿ ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡಬೇಕೆಂಬ ಬೇಡಿಕೆ ಬಹುದಿನಗಳಿಂದ ಇದೆ. ಆದರೆ, ಈ ಸಂಬಂಧ ಸಮಾಲೋಚನೆ ನಡೆಸಲಾಗುವುದು ಎಂದ ಅವರು, ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡಲು ತೀವ್ರ ವಿರೋಧವಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿನ ಅನಧಿಕೃತ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಮದ್ಯ ಪೂರೈಸುವ ವಸತಿ ಗೃಹಗಳ(ಲಾಡ್ಜ್) ಸಂಖ್ಯೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ ಎಂದ ಅವರು, ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹೊಸದಾಗಿ 900 ಎಂಎಸ್‌ಐಎಲ್ ಮದ್ಯದಂಗಡಿ ತೆರೆಯಲು ಕ್ರಮ ವಹಿಸಿದ್ದು, ಆಪೈಕಿ ಈಗಾಗಲೇ 130 ಅಂಗಡಿಗಳನ್ನು ತೆರೆಯಲಾಗಿದೆ ಎಂದ ಅವರು, ಮದ್ಯದ ದರ ಪಟ್ಟಿಯಲ್ಲಿನ ಚಿಲ್ಲರೆ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ಆದಾಯ ಖೋತಾ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ವಾಪ್ತಿಯಿಂದ ಮದ್ಯವನ್ನು ಹೊರಗಿಟ್ಟಿರುವುದರಿಂದ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಹೆದ್ದಾರಿ ಬದಿ ಮದ್ಯದಂಡಿಗಳ ಅಂತರ ಸಂಬಂಧ ನ್ಯಾಯಾಲಯದ ತೀರ್ಪಿನಿಂದ ಶೇ.4ರಷ್ಟು ಅಬಕಾರಿ ಆದಾಯ ಖೋತಾ ಆಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಅಬಕಾರಿ ಇಲಾಖೆಗೆ 16,483 ಕೋಟಿ ರೂ.ಆದಾಯ ಬಂದಿದ್ದು, ಪ್ರಸಕ್ತ ಸಾಲಿನಲ್ಲಿ 18,050 ಕೋಟಿ ರೂ.ಆದಾಯದ ನಿರೀಕ್ಷೆ ಇದೆ ಎಂದ ಅವರು, ತೆಂಗಿನ ಮರದಿಂದ ‘ನೀರಾ’ ಇಳಿಸುವ ಸಂಬಂಧ ಅ.30ರಂದು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಅಬಕಾರಿ ಇಲಾಖೆ ಪುನರ್ ರಚನೆ ಮಾಡಲು ಉದ್ದೇಶಿಸಿದ್ದು, ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್ಸ್‌ಪೆಕ್ಟರ್, ಗಾರ್ಡ್‌ಗಳು ಸೇರಿದಂತೆ 326 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು. ಅಲ್ಲದೆ, ಸಿಎಲ್-4 ಮತ್ತು ಸಿಎಲ್-9 ಪರವಾನಗೆ ನೀಡುವ ವೇಳೆ ಎಸ್ಸಿ-ಎಸ್ಟಿಗಳಿಗೆ ಮೀಸಲಾತಿ ಕಲ್ಪಿಸಲು ಉದ್ದೇಶಿಸಲಾಗಿದೆ.
-ಆರ್.ಬಿ.ತಿಮ್ಮಾಪುರ್ ,ಅಬಕಾರಿ ಸಚಿವ







