ಸಾಹಿತ್ಯ, ವಿಜ್ಞಾನ ಕ್ಷೇತ್ರದಲ್ಲಿ ಬೆಳೆಯಲು ಮನೆಯ ವಾತಾವರಣ ಕಾರಣ: ಡಾ.ಬಿ.ಎಸ್.ಶೈಲಜಾ
ಬೆಂಗಳೂರು, ಅ.28: ನಮ್ಮ ಮನೆಯಲ್ಲಿ ಸಾಹಿತ್ಯ ಪರಿಸರದ ವಾತಾವರಣ ಇದ್ದದ್ದರಿಂದಲೇ ಉಪನ್ಯಾಸಕಿಯಾಗಿ, ಸಾಹಿತ್ಯ ಹಾಗೂ ಖಗೋಳ ವಿಜ್ಞಾನ ಕೃತಿಗಳನ್ನು ರಚಿಸಲು ಸಾಧ್ಯವಾಯಿತು ಎಂದು ಖಗೋಳ ವಿಜ್ಞಾನಿ, ಸಾಹಿತಿ ಡಾ.ಬಿ.ಎಸ್.ಶೈಲಜಾ ಹೇಳಿದ್ದಾರೆ.
ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕಸಾಪ, ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ಆಯೋಜಿಸಿದ್ದ ಸಾಧಕರೊಡನೆ ಸಂವಾದ ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ತಂದೆಯವರಾದ ಚರಿತ್ರಕಾರ ಬಾ.ನ.ಸುಂದರ್‌ರಾವ್ ಅವರು ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಪುಸ್ತಕ ವಿಮರ್ಶೆ ಬರೆಯುತ್ತಿದ್ದರು. ಹಾಗೂ ಪುಸ್ತಕಗಳನ್ನು ನಮಗೂ ಓದಲು ಕೊಡುತ್ತಿದ್ದರು. ಹೀಗಾಗಿ, ಮನೆಯಲ್ಲಿ ಸಾಹಿತ್ಯ ಪರಿಸರದ ವಾತಾವರಣಯಿದ್ದಿದ್ದರಿಂದಲೇ ಉಪನ್ಯಾಸಕಿಯಾಗಿ, ಸಾಹಿತ್ಯ ಹಾಗೂ ಖಗೋಳ ವಿಜ್ಞಾನ ಕೃತಿಗಳನ್ನು ರಚಿಸಲು ಸಾಧ್ಯವಾಯಿತು ಎಂದು ಹೇಳಿದರು.
ಮನೆಯಲ್ಲಿ ಈಗಲೂ ಸಾವಿರಾರು ಪುಸ್ತಕಗಳ ಸಂಗ್ರಹವಿದ್ದು, ಕೈಯಿಟ್ಟಲ್ಲಿ ಒಂದು ಪುಸ್ತಕ ನಮ್ಮ ಕೈಗೆ ಸಿಗುತ್ತದೆ. ಅಲ್ಲದೆ, ನನ್ನ ಮದುವೆಯಾದ ಬಳಿಕ ಬೇರೆ ರಾಜ್ಯಕ್ಕೆ ಹೋಗಿದ್ದರಿಂದ ಕೆಲ ದಿನಗಳ ಕಾಲ ಬರೆಯುವುದನ್ನು ನಿಲ್ಲಿಸಿದ್ದೆ. ಆದರೆ, ಬಳಿಕ ಕರ್ನಾಟಕಕ್ಕೆ ಬಂದ ಮೇಲೆ ಪುನಹ ವಿಜ್ಞಾನ ಪುಸ್ತಕ, ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯಲು ಪ್ರಾರಂಭಿಸಿದೆ ಎಂದು ತಿಳಿಸಿದರು.
ವಿಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಜನರು ಸಾಧನೆ ಮಾಡಿದ್ದಾರೆ. ಆದರೆ, ಅವರಿಗೆ ಕನ್ನಡದಲ್ಲಿ ವಿಜ್ಞಾನ ಕೃತಿಗಳನ್ನು ರಚಿಸಲು ಬರುವುದಿಲ್ಲ. ಹಾಗೂ ಅವರಿಗೆ ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಾಂತರಿಸಿ ಬರೆಯುವುದು ಕಷ್ಟವೆಂದು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಡಾ.ವಸುಂಧರಾ ಭೂಪತಿ ಮಾತನಾಡಿ, ಖಗೋಳ ವಿಜ್ಞಾನಿ ಬಿ.ಎಸ್.ಶೈಲಜಾ ಅವರು ದೇವಸ್ಥಾನಗಳ ಕಂಬ ಹಾಗೂ ದೇವರ ಮೇಲೆ ಬೀಳುವ ಸೂರ್ಯ ಕಿರಣಗಳ ಬಗ್ಗೆ ತಿಳಿದು ಕೊಂಡು ಜನರಿಗೆ ಮಾಹಿತಿ ನೀಡಿ ಮೂಢನಂಬಿಕೆ ಹೋಗಲಾಡಿಸಲು ಹೋರಾಡಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2012ರಲ್ಲಿ ಭೂಕಂಪ ಆಗುತ್ತದೆ ಎಂದು ಎಲ್ಲರೂ ಅಬ್ಬರಿಸಿದಾಗ ಶೈಲಜಾ ಅವರು ಯಾವುದೆ ಕಾರಣಕ್ಕೂ ಭೂಕಂಪ ಆಗುವುದಿಲ್ಲ ಎಂದು ಖಚಿತವಾಗಿ ಹೇಳಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್, ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಮತ್ತಿತರರು ಉಪಸ್ಥಿತರಿದ್ದರು.







