ಶಿರಳಗಿ ಭಾಸ್ಕರ ಜೋಶಿಗೆ ‘ಚಿಟ್ಟಾಣಿ’, ಕೃಷ್ಣಕುಮಾರ್‌ಗೆ ‘ಟಿ.ವಿ.ರಾವ್ ಪ್ರಶಸ್ತಿ’ ಪ್ರದಾನ

ಉಡುಪಿ, ಅ.28: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಶ್ರೀವೀರಾಂಜನೆಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ ಉಡುಪಿ ಚಿಟ್ಟಾಣಿ ಅಭಿಮಾನಿ ಬಳಗದ ವತಿಯಿಂದ ರಾಜಾಂಗಣದಲ್ಲಿ ಶನಿವಾರ ನಡೆದ ಚಿಟ್ಟಾಣಿ ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಕಲಾವಿದರಾದ ಶಿರಳಗಿ ಭಾಸ್ಕರ ಜೋಶಿಗೆ ‘ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ’ ಮತ್ತು ಕೃಷ್ಣಕುಮಾರ್ ರಾವ್‌ಗೆ ‘ಟಿ.ವಿ.ರಾವ್ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಮಳೆಗಾಲದಲ್ಲಿ ನಾಲ್ಕೈದು ತಿಂಗಳು ಉಡುಪಿ ಶ್ರೀಕೃಷ್ಣ ನಿಗೆ ಸಪ್ತೋತ್ಸವ ನಡೆಯುವುದಿಲ್ಲ. ಅದಕ್ಕೆ ಯಕ್ಷಗಾನ ಕಲೆಯ ಮೂಲಕ ಶ್ರೀ ಕೃಷ್ಣನಿಗೆ ಸಪ್ತೋತ್ಸವ ನಡೆಯುತ್ತಿದೆ. ಯಕ್ಷಗಾನ ಕಲೆಯ ಮೂಲಕ ಚಿಟ್ಟಾಣಿ ಯವರು ಅಮರರಾಗಿ ಎಲ್ಲರ ಹೃದಯದಲ್ಲಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀವರ್ಚನ ನೀಡಿದರು. ಮುಖ್ಯ ಅತಿಥಿಗಳಾಗಿ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಸೀತಾ ರಾಮ ತೊಳ್ಪಾಡಿತ್ತಾಯ, ಉದ್ಯಮಿ ಗೋಪಾಲ ಬಂಗೇರ, ಹೈಟೆಕ್ ಆಸ್ಪತ್ರೆಯ ಡಾ.ಟಿ.ಎಸ್.ರಾವ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಣೇಶ್ ರಾವ್ ಉಪಸ್ಥಿತರಿದ್ದರು.
ಚಿಟ್ಟಾಣಿ ಅಭಿಮಾನಿ ಬಳಗದ ನಂದಕುಮಾರ್ ಸ್ವಾಗತಿಸಿದರು. ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಧುರಾ ಮಹೀಂದ್ರ ಯಕ್ಷಗಾನ ಪ್ರದರ್ಶನ ನಡೆಯಿತು.







